ಕುಕ್ಕೆ ಸುಬ್ರಮಣ್ಯ ಸ್ವಾಮಿಯ ಪವಾಡಗಳು

0
279

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಕ್ಷಿಣ ಕನ್ನಡದ ಪವಿತ್ರ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರದ ವಿಶೇಷತೆ ಏನು ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ನೆಲೆಯಾಗಿದ್ದು ಹೇಗೆ. ಸರ್ಪಸಂಸ್ಕಾರ ಸರ್ಪದೋಷ ನಿವಾರಣೆಗೆ ಈ ಕ್ಷೇತ್ರ ಪ್ರಸಿದ್ಧವಾಗಿದ್ದರ ಹಿಂದಿನ ರಹಸ್ಯವೇನು. ಎಲ್ಲವನ್ನು ಡೀಟೇಲ್ ಆಗಿ ಹೇಳುತ್ತೇವೆ. ಈ ಲೇಖನವನ್ನು ಪೂರ್ತಿಯಾಗಿ ಓದಿ. ಕುಕ್ಕೆಯಲ್ಲಿ ಸುಬ್ರಮಣ್ಯ ನೆಲೆಯಾಗಿದ್ದು ಹೇಗೆ. ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಕುಮಾರಧಾರ ನದಿ ತೀರದಲ್ಲಿದೆ. ದುಷ್ಟ ರಾಕ್ಷಸರ ಧಮನಕ್ಕಾಗಿ ಜನ್ಮವೆತ್ತಿದ ಈಶ್ವರ ಪುತ್ರ ಸುಬ್ರಹ್ಮಣ್ಯನು ತಾರಕಾದಿ ಅಸುರರನ್ನು ಯುದ್ಧದಲ್ಲಿ ಸಂಹರಿಸಿ ಸಹೋದರ ಗಣಪತಿಯ ಜೊತೆ ಕುಮಾರ ಪರ್ವತಕ್ಕೆ ಬಂದಿರುತ್ತಾರೆ. ಆಗ ದೇವೇಂದ್ರನು ತನ್ನ ಮಗಳಾದ ದೇವಸೇನೆಯನ್ನು ಸುಬ್ರಹ್ಮಣ್ಯನಿಗೆ ಕುಮಾರಧಾರ ತೀರ್ಥದ ದಡದಲ್ಲಿ ಮದುವೆ ಮಾಡಿಕೊಡುತ್ತಾನೆ. ಅದೇ ವೇಳೆಯಲ್ಲಿ ತಪಸ್ಸನ್ನು ಆಚರಿಸುತ್ತಿದ್ದ ನಾಗರಾಜನಾದ ವಾಸುಕಿಯ ಪ್ರಾರ್ಥನೆ ಮೇರೆಗೆ ತಾನು ದೇವಸೇನಾ ಜೊತೆಗೆ ಈ ಕ್ಷೇತ್ರದಲ್ಲಿ ನೆಲೆಸುವುದಾಗಿ ಸುಬ್ರಹ್ಮಣ್ಯ ಮಾತು ಕೊಡುತ್ತಾನೆ.

ಸರ್ಪದೋಷ ನಿವಾರಣೆಗೆ ಈ ಕ್ಷೇತ್ರ ಪ್ರಸಿದ್ಧವಾಗಿದ್ದು ಹೇಗೆ? ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಪ್ರವೇಶಿಸುವಾಗ ಅಲ್ಲಿ ಬಲ್ಲಾಳರಾಯನ ವಿಗ್ರಹ ಇದೆ. ಅದಕ್ಕೆ ಕುಂಬಳಕಾಯಿ ಬೆಣ್ಣೆ ಸಾಸಿವೆ ಹತ್ತಿ ಅರ್ಪಿಸಿದರೆ ಸರ್ಪ ದೋಷ ನಿವಾರಣೆಯಾಗುತ್ತದೆ ಅನ್ನೋ ನಂಬಿಕೆ ಇದೆ. ಆದರೆ ಅದರ ಹಿಂದೆಯೂ ಒಂದು ಪೌರಾಣಿಕ ಕಥೆ ಇದೆ. ಹಿಂದೆ ಮದ್ವಮೂಲ ವಿಷ್ಣುತೀರ್ಥರು ಸಂಸ್ಥಾನದಿಂದ ಸಿದ್ಧಪರ್ವತಕ್ಕೆ ತಪಸ್ಸಿಗೆ ಹೊರಟು ಹೋಗುವಾಗ ಮಧ್ವದಿಂದ ದತ್ತವಾದ ಅಕ್ಷಯಪಾತ್ರೆಯನ್ನು ತಗೊಂಡು ಹೋಗುತ್ತಾರೆ. ಆಗ ಇನ್ನೋರ್ವ ಸ್ವಾಮಿ ಅನಿರುದ್ಧ ತೀರ್ಥರನ್ನು ಕಂಡು ನಾಳೆ ನೀನು ಹರಿದ್ಯಾನದಲ್ಲಿ ಇರುವಾಗ ನೀನು ಬಯಸಿದಾಗ ಒಂದು ಅಕ್ಷಯ ಪಾತ್ರೆ ಕುಮಾರಧಾರದಲ್ಲಿ ತೇಲಿ ಬರುತ್ತದೆ. ಇನ್ನೊಂದು ಕನ್ನಡಿ ಹೊಳೆಯಲ್ಲಿ ತೇಲಿ ಬರುತ್ತದೆ. ಕುಮಾರಧಾರದಲ್ಲಿ ಬರುವುದನ್ನು ಸಂಸ್ಥಾನದಲ್ಲಿ ಇಟ್ಟುಕೊಂಡು ಮತ್ತೊಂದನ್ನು ಸ್ಥಾನಕ್ಕೆ ಕೊಡಬೇಕು ಎಂದು ತಿಳಿಸಿದರು. ಹಾಗೆ ಅನಿರುದ್ಧ ತೀರ್ಥರಿಗೆ ಅಕ್ಷಯ ಪಾತ್ರೆ ಸಿಕ್ಕ ವಿಚಾರ ಊರು ತುಂಬಾ ಸುದ್ದಿಯಾಯಿತು. ಒಂದನ್ನ ಅವರೇ ಇಟ್ಟುಕೊಂಡು ಇನ್ನೊಂದು ಅಕ್ಷಯಪಾತ್ರೆಯನ್ನು ಮಾತ್ರ ದೇವಸ್ಥಾನಕ್ಕೆ ನೀಡಿದ್ದಾರೆ ಅಂತ ಬಲ್ಲಾಳರಾಯನಿಗೆ ದೂರು ಹೋಯಿತು.

ಕೋಪಗೊಂಡ ಬಲ್ಲಾಳ ಅನಿರುದ್ಧ ಸ್ವಾಮಿ ತಮ್ಮಲ್ಲೇ ಉಳಿಸಿಕೊಂಡ ಅಕ್ಷಯಪಾತ್ರೆಯನ್ನು ವಾಪಸ್ ಕೊಡಬೇಕೆಂದು ಆಗ್ರಹಿಸಿದ್ದ. ನಾನು ಗುರುಗಳ ಹೇಳಿಕೆಯಂತೆ ಅಕ್ಷಯ ಪಾತ್ರೆ ಉಳಿಸಿಕೊಂಡಿದ್ದೇನೆ ಅಂತ ಸ್ವಾಮಿಗಳು ಪರಿ-ಪರಿಯಾಗಿ ಬೇಡಿಕೊಂಡರು ಬಲ್ಲಾಳ ಕೇಳಲೇ ಇಲ್ಲ. ಒತ್ತಾಯದಿಂದ ಅಕ್ಷಯ ಪಾತ್ರೆ ಪಡೆದುಕೊಂಡ ಬಲ್ಲಾಳ ಅದರ ಮುಚ್ಚಳ ತೆಗೆಯಲು ಬಾರಿ ಪ್ರಯತ್ನ ಮಾಡುತ್ತಾನೆ. ಆದರೆ ಅದು ಸಾಧ್ಯವಾಗಲೇ ಇಲ್ಲ. ಕೊನೆಗೆ ಪಟ್ಟದಾನೆಯ ಕಾಲಿನಿಂದ ಮೆಟ್ಟಿಸಿದ. ಆದರೆ ಆನೆ ಮೈ ಉರಿ ತಾಳಲಾರದೆ ನದಿಯಲ್ಲಿ ಬಿದ್ದು ಸತ್ತು ಹೋಯಿತು. ಆ ಆನೆ ಬಿದ್ದು ಸತ್ತ ಸ್ಥಳ ಆನೆಗುಂಡಿ ಎಂದು ತುಂಬಾ ಪ್ರಸಿದ್ಧವಾಯಿತು. ಬಳಿಕ ಬಲ್ಲಾಳನಿಗೂ ಮೈ ಉರಿ ಶುರುವಾಗಿ ಬೊಕ್ಕೆಗಳು ಎದ್ದವು. ಕಂಗೆಟ್ಟ ಬಲ್ಲಾಳ ದಯವಿಟ್ಟು ನನ್ನನ್ನು ಕಾಪಾಡು ಎಂದು ಸುಬ್ರಹ್ಮಣ್ಯನನ್ನು ಪ್ರಾರ್ಥಿಸುತ್ತಾನೆ.

ಆಗ ಸುಬ್ರಹ್ಮಣ್ಯ ನೀನು ಗುರು ದ್ರೋಹ ಮಾಡಿರುವೆ ಈಗ ಶರಣಾಗಿದ್ದರಿಂದ ನಿನ್ನ ಪಾಪ ವಿಮೋಚನೆ ಆಗಬೇಕಿದೆ. ನಿನ್ನ ಮೈ ಉರಿ ಕಡಿಮೆಯಾಗಬೇಕಾದರೆ ನಿನ್ನ ಕಲ್ಲಿನ ವಿಗ್ರಹ ಮಾಡಿ ನನ್ನ ಸನ್ನಿಧಿಯಲ್ಲಿ ಇರಿಸು. ಭಕ್ತಾದಿಗಳು ನಿನಗೆ ಕುಂಬಳಕಾಯಿ ಬೆಣ್ಣೆ ಹತ್ತಿ ಸಾಸಿವೆ ಪದಾರ್ಥಗಳನ್ನು ಹರಕೆಯಾಗಿ ಸಲ್ಲಿಸುವರು. ಅದನ್ನ ಮಾರಿ ಬಂದ ಹಣವನ್ನು ಸಂಸ್ಥಾನ ಮಠಕ್ಕೆ ಅರ್ಪಿಸಬೇಕು. ಅಲ್ಲದೇ ದೇವಸ್ಥಾನದ ಅಧಿಕಾರವನ್ನು ಮಠದ ಸ್ವಾಮಿಗಳಿಗೆ ಒಪ್ಪಿಸಬೇಕು ಎಂದು ತಿಳಿಸಿದರು. ಆ ಪ್ರಕಾರ ನಡೆದುಕೊಂಡ ಬಳಿಕ ಬಲ್ಲಾಳನ ಸಂಕಟ ನಿವಾರಣೆಯಾಯಿತು. ಆ ವಿಗ್ರಹವೇ ಇಂದಿಗೂ ಇದ್ದು ಅದನ್ನು ಸ್ಥಳಾಂತರಿಸಬಾರದೆಂಬ ನಿಯಮವಿದೆ. ಮೈ ಮೇಲಿನ ಬೊಕ್ಕೆ ನಿವಾರಣೆಗಾಗಿ ಹರಕೆ ಹೊರುವವರು ಮೇಲೆ ಉಲ್ಲೇಖಿಸಿದ ವಸ್ತುಗಳನ್ನ ಈ ವಿಗ್ರಹಕ್ಕೆ ಅರ್ಪಿಸುತ್ತಾರೆ.

ಎಲ್ಲಾ ನಾಗದೋಷಗಳಿಗೂ ಇಲ್ಲಿದೆ ಪರಿಹಾರ. ಪವಿತ್ರ ಕುಮಾರಧಾರ ತೀರ್ಥ ಸ್ನಾನ ಮತ್ತು ಮಡೆ ಸ್ನಾನದಿಂದ ಕುಷ್ಠ ರೋಗದಂತಹ ಭಯಾನಕ ರೋಗಗಳೂ ಚರ್ಮವ್ಯಾಧಿಗಳೂ ಶಮನವಾಗುವುದೆಂಬ ನಂಬಿಕೆ ಭಕ್ತರಲ್ಲಿದೆ. ಶ್ರೀ ಕ್ಷೇತ್ರದಲ್ಲಿ ಪ್ರತಿನಿತ್ಯ ಸಹಸ್ರಾರು ಭಕ್ತಾದಿಗಳಿಗೆ ನಿತ್ಯ ಅನ್ನ ಸಂತರ್ಪಣೆ ನಡೆಯುತ್ತದೆ. ಸರ್ಪದೋಷದಿಂದ ಬರುವಂತಹ ಸಂತಾನಹೀನತೆ ಚರ್ಮವ್ಯಾಧಿ ದೃಷ್ಠಿ ಮಾಂದ್ಯತೆ ಭೂಮಿದೋಷ ಮೊದಲಾದ ಸಮಸ್ಯೆಗಳಿಗೆ ಪರಿಹಾರವಾಗಿ ಸರ್ಪಸಂಸ್ಕಾರ ನಾಗಪ್ರತಿಷ್ಠೆ ಆಶ್ಲೇಷಬಲಿ ಇತ್ಯಾದಿ ಪ್ರಮುಖ ಹರಕೆ ಸೇವೆಗಳನ್ನು ಭಕ್ತರು ಸಲ್ಲಿಸುತ್ತಾರೆ. ಈ ಲೇಖನವನ್ನು ಶೇರ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿರಿ.

LEAVE A REPLY

Please enter your comment!
Please enter your name here