ಗರಿಗರಿಯಾದ ತೊಡೆದೇವು ಸವಿದವರಿಗೇ ಗೊತ್ತು ಅದರ ರುಚಿ

0
57

ಕಾರ್ತೀಕ ಮಾಸದಲ್ಲಿ ಬರುವ ತುಳಿಸಿ ಪೂಜೆ ಮುಗಿದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ ಭಾಗಗಳಲ್ಲಿ ಆಲೆಮನೆ ಹಾಕಿರುತ್ತಾರೆ. ಚುಮುಚುಮು ಚಳಿಯಲ್ಲಿ ನಸುಕಿನಲ್ಲೆದ್ದು ತಂಪಾದ ಕಬ್ಬಿನ ಹಾಲನ್ನು ಗಟಗಟನೆ ಕುಡಿಯೋ ಮಜಾನೇ ಬೇರೆ. ಬಾಳೆ ಎಲೆ ಮೇಲೆ ಬಿಸಿಬಿಸಿ ನೊರೆ ಬೆಲ್ಲ ತಿನ್ನುವುದು ಕೂಡ ಅದ್ಭುತ ಅನುಭವ. ನಿಮಗೆ ಇಂತಹ ಅವಕಾಶ ಸಿಕ್ಕರೆ ಖಂಡಿತ ಬಿಡಬೇಡಿ.

ಕಬ್ಬಿನ ಹಾಲು, ಬೆಲ್ಲ ಇಷ್ಟಕ್ಕೇ ಆಲೆಮನೆ ಸೀಮಿತವಾಗಿಲ್ಲ. ಹಲವು ರುಚಿಕರ, ಸ್ವಾದಿಷ್ಟ ಸಿಹಿ ತಿನಿಸುಗಳಿಗೂ ಸೀಜನ್‌ ಎನಿಸಿದೆ. ಅಂಥ ತಿನಿಸುಗಳಲ್ಲಿ ತೊಡೆದೇವು ಅನ್ನೋ ತಿನಿಸು ಪ್ರಮುಖವಾದದ್ದು. ಅಲೆಮನೆ  ಆಗಲಿ, ಊರಿನಲ್ಲಿ ಎಲ್ಲೇ ಆಗಲಿ ಮನೆಯ ಅಟ್ಟ ಏರಿದ್ದ ದೊಡ್ಡ ಗಡಿಗೆ ಅಥವಾ ಮಡಿಕೆ ಕೆಳಗೆ ಇಳಿದು, ತೊಳೆದು ಎಣ್ಣೆ ಬಳಿದು ಇಡುತ್ತಾರೆ. ತೊಡೆದೇವು ಮಾಡೋ ಗಡಿಗೆ ಹೊರಗೆ ಕಾಣಿಸಿಕೊಂಡಿತು ಅಂದರೆ ಅಲ್ಲಿ ತೊಡೆದೇವು ಕಂಬಳವಿದೆ ಎಂದು ಲೆಕ್ಕಾಚಾರ ಹಾಕಬಹುದು.

ಆದರೆ ತೊಡೆದೇವು ಅಷ್ಟು ಸುಲಭಕ್ಕೆ ದಕ್ಕುವುದಿಲ್ಲ. ಸಾಕಷ್ಟು ಶ್ರಮದಾಯಕ. ಒಳಕಲ್ಲಿನ ಮುಂದೆ ಕುಳಿತು ನುಣ್ಣಗೆ ಅರೆಯಬೇಕು. ಬೆಂಕಿ ಮುಂದೆ ಬೆವರಿಳಿಸಬೇಕು. ಕಟ್ಟಿಗೆ ಒಲೆಯಿಂದ ಆಗಾಗ ಹೊಮ್ಮುವ ಹೊಗೆ ಕುಡಿಯಬೇಕು. ಹೌದು ಇಷ್ಟೆಲ್ಲ ಶ್ರಮಪಟ್ಟರೆ ಮಾತ್ರ ರುಚಿಕರ. ಗರಗರಿಯಾದ ತೊಡೆದೇವು ಸವಿಯಲು ಸಿದ್ಧವಾಗೋದು. ಅದು ಗಡಿಗೆ ಮೇಲೆ ಅನ್ನೋದು ವಿಶೇಷ. ಆದರೆ ಇತ್ತೀಚೆಗೆ ಆಲೆಮನೆಗಳು ಕಡಿಮೆಯಾಗುತ್ತಿದ್ದು  ತೊಡೆದೇವು ಕೂಡ ಅಪರೂಪವಾಗುತ್ತಿದೆ. ಕಟ್ಟಿಗೆ ಒಲೆ ಮುಂದೆ ಕುಂತು ನಿಂತು ಹೊಗೆಯಲ್ಲಿ ಕಣ್ಣುರಿಸಿಕೊಳ್ಳುವ ಗೋಳು ಬೇಡಪ್ಪ ಎಂದು ಹೇಳುವವರೇ ಹೆಚ್ಚು. ಆದರೆ ಕೆಲವೆಡೆ ಗೋಬರ್‌ ಗ್ಯಾಸ್‌ ಹಾಗೂ ಅಡುಗೆ ಅನಿಲ ಬಳಸಿಯೂ ಗಡಿಗೆ ಮೇಲೆ ತೊಡೆದೇವು ಮಾಡುವ ಚಾಣಾಕ್ಷತನವನ್ನು ಮಲೆನಾಡಿನ ಮಹಿಳೆಯರು ಕಂಡುಕೊಂಡಿದ್ದಾರೆ.

ಅಷ್ಟಕ್ಕು ತೊಡೆದೇವು ಮಾಡುವುದು ಗಡಿಗೆಯ ಹೊರಭಾಗದ ಮೇಲೆ. ಅಕ್ಕಿಯನ್ನು ಕಬ್ಬಿನ ಹಾಲಿನಲ್ಲಿ ನೆನೆ ಹಾಕಬೇಕು. 2ರಿಂದ 3 ದಿನಗಳ ಕಾಲ ನೆನೆದ ಅಕ್ಕಿಯನ್ನು ತೊಳೆದು ಅದನ್ನು ನೀರಿನ ಬದಲು ಅರ್ಧ ಹದ ಕುದಿ ಬಂದ ಬೆಲ್ಲದ ಜೊತೆ ಗಂಧದಷ್ಟು ನುಣ್ಣಗೆ ಬೀಸಬೇಕು. ಬೀಸುವಾಗ ಅಕ್ಕಿ ಜೊತೆ ಏಲಕ್ಕಿ, ಅರಿಷಿಣ ಪುಡಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಬೇಕು. ನುಣ್ಣಗೆ ಅರೆದ ಅಕ್ಕಿಹಿಟ್ಟಿನಲ್ಲಿ ಕೈ ಬೆರಳು ಅದ್ದಿದರೆ ಬೆರಳಿಗೆ ತೆಳುವಾಗಿ ಹಿಡಿಯುವಂತಿರಬೇಕು. ಇಷ್ಟಾದ ಮೇಲೆ ಗಡಿಗೆಯನ್ನು ಒಲೆಯ ಮೇಲೆ ಕವಚಿ ಇಟ್ಟು ಕಾಯಿಸಿ, ಎಣ್ಣೆ ಸವರಬೇಕು. ಒಂದು ಬಟ್ಟಲಿಗೆ ಬೀಸಿದ ಅಕ್ಕಿ ಹಿಟ್ಟನ್ನು ಸುರುವಿಕೊಳ್ಳಬೇಕು. ಒಂದು ಕೋಲಿಗೆ ತೆಳುವಾಗ ಬಟ್ಟೆ ಅಥವಾ ಪಂಚೆ ಬಟ್ಟೆ ಸುತ್ತಿಕೊಂಡು ಅರ್ಧ ಅಡಿಯಗಲದ ಬಟ್ಟೆಯನ್ನು ಹಾಗೇ ಬಿಡಬೇಕು.

ಅದನ್ನು ಅಕ್ಕಿಹಿಟ್ಟಿನಲ್ಲಿ ಅದ್ದಿ ಗಡಿಗೆ ಮೇಲೆ ಪ್ಲಸ್‌ ಆಕಾರದಲ್ಲಿ ಎಳೆಯಬೇಕು. ಒಂದೆರೆದು ನಿಮಿಷದಲ್ಲೇ ಅದು ಬೆಂದು ಕಂದು ಬಣ್ಣಕ್ಕೆ ಬರುತ್ತದೆ. ಹಾಳೆಕಡಿ ಅಂದರೆ ಅಡಿಕೆ ಮರದ ಹಾಳೆಯ ಒಂದು ಭಾಗ. ಇದನ್ನು ಬಳಸಿ ಅದನ್ನು ಗಡಿಗೆಯಿಂದ ಬಿಡಿಸಿ, ತ್ರಿಕೋನಾಕಾರಕ್ಕೆ ಮಡಚಿಡಬೇಕು. ಸ್ವಲ್ಪ ಗಾಳಿ ತಾಗುತ್ತಲೇ ಗರಿಗರಿ ತೊಡೆದೇವು ಸಿದ್ಧ. ತುಪ್ಪದ ಜೊತೆ ತಿಂದರೆ ಅದ್ಭುತ ಸವಿರುಚಿ. ಹೆಚ್ಚು ತಿಂದರೆ ಉಷ್ಣ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

LEAVE A REPLY

Please enter your comment!
Please enter your name here