ನೂರೊಂದು ಕಷ್ಟಗಳನ್ನು ತೀರಿಸುವ ಗಣಪತಿಗೆ

0
23

ಮೈಸೂರು ಕರ್ನಾಟಕ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ ಮತ್ತು ಹಿಂದಿನ ಮೈಸೂರು ಸಂಸ್ಥಾನದ ಹಳೆಯ ರಾಜಧಾನಿ. ಮೈಸೂರನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಗಿದೆ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು ಕೆಲವೊಮ್ಮೆ ಅರಮನೆಗಳ ನಗರ ಎಂದೂ ಕರೆಯಲಾಗುತ್ತದೆ. ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡ ನಗರವೆಂಬ ಪ್ರಖ್ಯಾತಿಯನ್ನೂ ಸಹ ಪಡೆದಿದೆ. ಮೈಸೂರಿನಲ್ಲಿ ಹಿಂದಿನ ಕಾಲದಿಂದಲೂ ತುಂಬಾ ಹಳೆಯದಾದ ಒಂದು ಭಾಗ ಅಗ್ರಹಾರ. ಈ ಅಗ್ರಹಾರದ ತ್ಯಾಗರಾಜರ ವೃತ್ತದಲ್ಲಿ ನೂರೊಂದು ಗಣಪತಿ ದೇಗುಲ ತುಂಬಾ ಪ್ರಖ್ಯಾತಿ ಪಡೆದಿದೆ. ಇದು ಕಳೆದ ಅರವತ್ತು ವರ್ಷಗಳ ಇತಿಹಾಸವನ್ನು ಹೊಂದಿದೆ.

ಮೈಸೂರು ನಗರದ ಸುಪ್ರಸಿದ್ಧ ತಾಣ ತ್ಯಾಗರಾಜ ವೃತ್ತದಲ್ಲಿ ಸತತ 30 ವರ್ಷಗಳಿಂದ ಪ್ರತಿ ವರ್ಷ ಗಣಪತಿ ವಿಗ್ರಹ ಪ್ರತಿಷ್ಠಾಪಿಸಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತ ಬಂದಿದ್ದರು. ಜನ ಜಾತ್ರೆಯ ಸೊಬಗು ಉತ್ಸಾಹ ಹಬ್ಬದ ಸಡಗರ ಶಾಶ್ವತವಾಗಿ ಉಳಿಯಬೇಕು. ನಿತ್ಯವೂ ಇಲ್ಲಿ ಗಣೇಶನ ಆರಾಧನೆಗೆ ಜನ ಸೇರುವಂತೆ ಮಾಡಬೇಕು ಎಂಬ ಆಲೋಚನೆ ಇಲ್ಲಿನ ಹಿರಿಯರ ಮನದಲ್ಲಿ ಮೂಡಿಬಂತು. ಈ ಆಲೋಚನೆ ಭಕ್ತ ಮಂಡಳಿಗೆ ಬಂದ ತಕ್ಷಣ ಎಲ್ಲರೂ ಸಹಕಾರ ನೀಡಿದರು. ಹೀಗೆ ಭಕ್ತ ಸಮುದಾಯದ ಸಹಕಾರದ ಫಲವಾಗಿ ಕಾರ್ಯ ಪ್ರಾರಂಭವಾಯಿತು.ನಂತರ 1985ರ ಫೆಬ್ರುವರಿ 2ರಿಂದ 4ರವರೆಗೆ ದೇಗುಲದ ಪ್ರತಿಷ್ಠಾಪನಾ ಮಹೋತ್ಸವ ಜರುಗಿತು.

ಇನ್ನು ಈ ದೇವಾಲಯದ ನೂರೊಂದು ಮೂರ್ತಿ ಕಲಾಕಾರರು ಕೂಡ ಮೈಸೂರಿನ ಪ್ರಸಿದ್ದ ಮಾಸ್ಟರ್ ಕ್ರಾಫ್ಟ್‍ಮನ್ ಎಂದೇ ಖ್ಯಾತರಾಗಿದ್ದ ಎಸ್.ನರಸಿಂಹಾಚಾರ್ಯರು. ಇವರು ಗಣಪತಿ ವಿಗ್ರಹಗಳಷ್ಟೇ ಅಲ್ಲ ದೇವಸ್ಥಾನದ ಇನ್ನಿತರ ಕೆಲಸಗಳಾದ ವಿವಿಧ ಕೆತ್ತನೆಗಳು, ಗರ್ಭಗುಡಿಯ ಬಾಗಿಲುಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದು ಇವುಗಳು ಇವರ ಕಲಾಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಲ್ಲಿನ ಗಣೇಶ ಮೂರ್ತಿ ಶ್ರೀ ಚಕ್ರ ಸಹಿತವಾಗಿದ್ದು ಮೊದಲ ಮೆಟ್ಟಿಲ ಹಂತದಲ್ಲಿ 32 ವಿಗ್ರಹಗಳಿದ್ದು, ಎರಡನೆಯ ಮೆಟ್ಟಿಲ ಹಂತದಲ್ಲಿ 28 ಗಣೇಶ ವಿಗ್ರಹಗಳಿವೆ. ಮೂರನೆಯ ಮೆಟ್ಟಿಲಲ್ಲಿ 24 ನಾಲ್ಕನೆಯ ಮೆಟ್ಟಿಲಲ್ಲಿ 16 ಪ್ರಧಾನ ಹಂತ ಮೇಲೆ ಪ್ರಧಾನ ಗಣಪತಿ ಕಪ್ಪು ಶಿಲೆಯಲ್ಲಿ ಗಮನ ಸೆಳೆಯುತ್ತವೆ.

ಜೊತೆಗೆ ಇಲ್ಲಿ ಜನ್ಮ ನಕ್ಷತ್ರಕ್ಕನುಗುಣವಾಗಿ ಕೂಡ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.ಈ ದೇವಾಲಯದ ಈಶಾನ್ಯ ಮೂಲೆಯಲ್ಲಿ 108 ಶಿವಲಿಂಗ ಅಂದರೆ ಈಶ್ವರ ಲಿಂಗದ ಮುಖಭಾಗದಲ್ಲಿ 108 ಶಿವಲಿಂಗ ಕೆತ್ತನೆ ಇದ್ದು,ಪೂರ್ವಕ್ಕೆ ನವಗ್ರಹಗಳಿರುವ ದೇಗುಲ ಇದೆ. ಪ್ರತಿದಿನ ಬೆಳಿಗ್ಗೆ 5 ರಿಂದ ಅಭಿಷೇಕ ಪೂಜೆ ಪ್ರಾರಂಭಗೊಂಡು 7 ಗಂಟೆಗೆ ಮಹಾಮಂಗಳಾರತಿ ಜರುಗುತ್ತದೆ 11 ಗಂಟೆಗೆ ದೇವಾಲಯ ಮುಚ್ಚಲಾಗುತ್ತದೆ. ಮತ್ತೆ ಸಾಯಂಕಾಲ 5-30 ರಿಂದ ರಾತ್ರಿ 9 ರ ವರೆಗೆ ತೆರೆದಿರುತ್ತದೆ. ಈ ದೇಗುಲಕ್ಕೆ ಮೈಸೂರು ಬಸ್ ನಿಲ್ದಾಣದಿಂದ 4ಕಿ.ಮೀ, ಇದ್ದು ನಗರ ಬಸ್ ನಿಲ್ದಾಣದಿಂದ 2 ಕಿ.ಮೀ ಅಂತರದಲ್ಲಿ ಅಗ್ರಹಾರ ಇದೆ. ಅಗ್ರಹಾರ ಬಸ್ ಸ್ಟಾಪ್ ಇಂದ ಸುಮಾರು 200 ಮೀಟರ್ ನೆಡೆದರೆ 101 ಗಣಪತಿ ದೇಗುಲ ಸಿಗುತ್ತದೆ.

LEAVE A REPLY

Please enter your comment!
Please enter your name here