ಎಸ್ಟೋ ರೋಗಗಳಿಗೆ ನಮ್ಮ ಮನೆಯಲ್ಲೇ ಪರಿಹಾರ ಇರುತ್ತದೆ. ಅವುಗಳನ್ನು ತಿಳಿದುಕೊಂಡು ಉಪಯೋಗ ಮಾಡುವುದರಿಂದ ವೈದ್ಯರ ಬಳಿ ಹೋಗುವ ಅವಶ್ಯಕತೆ ಇರುವುದಿಲ್ಲ.
ಚಿಕ್ಕ ಪುಟ್ಟ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬಹುದು.ಈಗಿನ ಆಹಾರ ಪದ್ಧತಿಯಿಂದ, ಹಾಗೂ ಕಲಬೆರಕೆ ಧಾನ್ಯ, ವಿಷಪೂರಿತ ತರಕಾರಿ ಹಾಗೂ ಹಣ್ಣುಗಳಿಂದ ನಮ್ಮ ದೇಹದಲ್ಲಿ ಪ್ರತಿದಿನವೂ ಸ್ವಲ್ಪ ಸ್ವಲ್ಪ ವಿಷ ಹೋಗುತ್ತಾ ಇರುತ್ತದೆ. ಹಾಗೆಯೇ ನಾವು ಮನೆಯಲ್ಲಿ ಜೀರಿಗೆ ಕಷಾಯ ಕೊತ್ತುಂಬರಿ ಜ್ಯೂಸು ಅರಿಶಿನದ ನೀರು, ಅತ್ತಿ ನೀರು, ಎಳೆನೀರು ಇಂತಹ ಪೆಯಹಳನ್ನು ಆಗಾಗ ಕುಡಿಯುವುದರಿಂದ ನಮ್ಮ ದೇಹವನ್ನು ಸ್ವಲ್ಪ ಮಟ್ಟಿಗೆ ಆರೋಗ್ಯವಾಗಿ ಇಟ್ಟುಕೊಳ್ಳಬಹುದು.
ಚೇಳು ಕಡಿದಾಗ ಕಾಳು ಮೆಣಸಿನ ಹುಡಿಯನ್ನು ಉದುರಿಸಬಹುದು. ಮಲೇರಿಯಾ ಜ್ವರಕ್ಕೆ ಕಾಳುಮೆಣಸಿನ ಕಷಾಯ ಉತ್ತಮ ಔಷಧಿ. ಹಸಿವೆ ಇಲ್ಲದಿರುವಾಗ ಕಾಳು ಮೆಣಸು,ಶುಂಠಿ ಮತ್ತು ಬೆಲ್ಲ ಇವುಗಳನ್ನು ಸೇರಿಸಿ ಜಜ್ಜಿ ತಿನ್ನುವುದು ಒಳ್ಳೆಯದು.
ಎಳ್ಳೆಣ್ಣೆ ಯನ್ನು ಪ್ರತಿದಿನ ಬಳಸಿದರೆ ವಾತದ ಕಾಯಿಲೆಗಳ ಸಂಭವವು ಕಡಿಮೆಯಾಗುತ್ತದೆ.ಎಳ್ಳನ್ನು ಅರೆದು ಕುಡಿಯುವುದು ಮೂಲ ವ್ಯಾಧಿಗೆ ಉತ್ತಮ ಔಷಧಿಯಾಗಿದೆ. ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಮೈ ಕಾಂತಿ ಹೆಚ್ಚುತ್ತದೆ. ಗರ್ಭಿಣಿಯ ಆರೋಗ್ಯಕ್ಕೆಎಳ್ಳಿನ ಉಂಡೆ ತಿನ್ನುವುದು ಒಳ್ಳೆಯದು.
ನೆಗಡಿಯಿಂದ ಮೂಗು ಕಟ್ಟಿದಾಗ ಅರಶಿನದ ತುಂಡನ್ನು ಬೆಂಕಿಗೆ ಹಾಕಿ ಬರುವ ಹೊಗೆಯನ್ನು ಆಘ್ರಾಣಿಸ ಬೇಕು.ಕೀಟ, ಚೇಳು ಕಡಿತಕ್ಕೆ ಅರಶಿನ ಹಚ್ಚುವುದು ಪ್ರಥಮ ಚಿಕಿತ್ಸೆ. ಹಳೆಯ ದಮ್ಮು ಕಾಯಿಲೆಗೆ ತುಪ್ಪದಲ್ಲಿ ಹುರಿದ ಅರಶಿನದ ನಿತ್ಯ ಸೇವನೆ ಉತ್ತಮ ಚಿಕಿತ್ಸೆ. ಪ್ರಮೇಹ ರೋಗಗಳಿಗೆ ಅರಶಿನ ಉತ್ತಮ.
ಜೀರಿಗೆ ಎಣ್ಣೆ ತುರಿ ಕಜ್ಜಿಗೆ ಉತ್ತಮ ಔಷದಿ .ಹೊಟ್ಟೆಯಲ್ಲಿ ವಾಯು ತುಂಬಿ ಸಂಕಟವಾದಾಗ ಸ್ವಲ್ಪ ಜೀರಿಗೆಯನ್ನು ಜಗಿದು ಉಪಶಮನ ಪಡೆಯ ಬಹುದು. ಗೊಗ್ಗರ ಧ್ವನಿ, ಹಳೆಯ ಅತಿಸಾರಗಳಿಗೂ ಇದು ಒಳ್ಳೆಯ ಔಷಧಿ. ಗರ್ಭಿಣಿಯರು ಸತತವಾಗಿ ಜೀರಿಗೆಯನ್ನು ಉಪಯೋಗಿ ಸುವುದರಿಂದ ಹೆರಿಗೆ ಸುಸೂತ್ರವಾಗುತ್ತದೆ. ಎದೆ ಹಾಲಿನ ಪ್ರಮಾಣವು ಹೆಚ್ಚುತ್ತದೆ. ಬಿಕ್ಕಳಿಕೆ ಉಂಟಾದಾಗ ಜೀರಿಗೆ ಮತ್ತು ತುಪ್ಪವನ್ನು ಬೆಂಕಿಗೆ ಹಾಕಿ, ಆ ಹೊಗೆಯನ್ನು ಆಘ್ರಾಣಿಸಬೇಕು.ಅಜೀರ್ಣ ರೋಗದಲ್ಲಿ ದಿನ ನಿತ್ಯ ಜೀರಿಗೆ ಉಪಯೋಗಿಸ ಬೇಕು.
ವಿಷಸೇವನೆ ಯಾದಾಗ ವಾಂತಿ ಮಾಡಿಸಲು ಸಾಸಿವೆ ಅರೆದು ಕುಡಿಸ ಬೇಕು. ಬಿದ್ದು ಪೆಟ್ಟಾದಲ್ಲಿ ಅಥವಾ ಬೇರೆ ಯಾವುದೇ ನೋವಿದ್ದಲ್ಲಿ ಸಾಸಿವೆ ಅರೆದು ಲೇಪ ಹಾಕಬೇಕು. ಸಿಹಿಮೂತ್ರ ಕಾಯಿಲೆಯಲ್ಲಿ ಸಾಸಿವೆ ಎಣ್ಣೆ ಉಪಯೋಗ ಉತ್ತಮ.ಸಾಸಿವೆ ಗಿಡದ ಎಲೆಯಿಂದ ಮಾಡಿದ ಪಲ್ಯ ಹೊಟ್ಟೆ ಹುಳಗಳಿಗೆ ಪ್ರತಿಬಂಧಕ. ಸಾಸಿವೆ ಎಣ್ಣೆ ಚರ್ಮದ ಆರೋಗ್ಯ ಕಾಪಾಡುತ್ತದೆ. ಚಳಿಗಾಲದಲ್ಲಿ ಕಾಲು ಒಡೆಯುವಾಗ ಸಾಸಿವೆ ಎಣ್ಣೆ ಹಚ್ಚ ಬೇಕು.