ನಾಲ್ಕು ಕಾಳು ಮೆಂತ್ಯ ತಿಂದರೆ ಇಷ್ಟೆಲ್ಲಾ ಲಾಭ ಇದ್ಯ

2
3716

ಮೆಂತ್ಯ ತಿನ್ನಿ ಆಮೇಲೆ ನೋಡಿ ಬದಲಾವಣೆ

ದೇಹದಲ್ಲಿ ಉಷ್ಣತೆ ಹೆಚ್ಚಾಗಿದೆಯೇ, ಅಜೀರ್ಣವೇ, ಅತಿಸಾರ, ಸುಸ್ತು. ಹಾಗಿದ್ದರೆ ನಾಲ್ಕು ಕಾಳು ಮೆಂತ್ಯವನ್ನು ಮೊಸರಲ್ಲಿ ನೆನೆಸಿ, ಮುಂಜಾನೆ ಖಾಲಿ ಹೊಟ್ಟೆಗೆ ಸೇವಿಸಿ, ಸಮಸ್ಯೆಗಳು ದೂರಾಗುತ್ತವೆ. ಇದು ಮನೆಯಲ್ಲಿನ ಹಿರಿಯ ಜೀವಗಳ ಆರೋಗ್ಯ ಸಲಹೆ’
ಹೌದು, ಮೆಂತ್ಯ ಕಾಳು, ಮೆಂತ್ಯ ಸೊಪ್ಪು ಕೇವಲ ತರಕಾರಿ ಮಾತ್ರವಲ್ಲ, ಔಷಧಿಯುಕ್ತ ಆಹಾರ ಸಹ. ಹಾಗಾಗಿಯೇ ಸೊಪ್ಪುಗಳಲ್ಲಿ ಮೆಂತ್ಯ ಸೊಪ್ಪಿಗೆ ವಿಶಿಷ್ಟ ಸ್ಥಾನ. ಮೆಂತ್ಯ ಸೊಪ್ಪು ಮತ್ತು ಬೀಜ ಎರಡೂ ವಿಶ್ವದಾದ್ಯಂತ ಬಳಕೆಯಲ್ಲಿವೆ. ಭಾರತವೂ ಸೇರಿದಂತೆ ಅರ್ಜೆಂಟೀನ, ಫ್ರಾನ್ಸ್, ಸ್ಪೇನ್, ಮೊರೊಕ್ಕೊ ದೇಶಗಳಲ್ಲಿ ಅದನ್ನು ಬೆಳೆಯುತ್ತಾರೆ. ಎಲ್ಲೇ ಬೆಳೆದರೂ ಭಾರತದಲ್ಲಿ ಮೆಂತ್ಯ ಬೆಳೆಯುವಷ್ಟು ಎಲ್ಲೂ ಬೆಳೆಯಲಾರರು. ನಮ್ಮ ದೇಶದಲ್ಲಿ ಮೆಂತ್ಯಕ್ಕೆ ವೈವಿಧ್ಯಮಯ ಹೆಸರುಗಳಿವೆ. ಮರಾಠಿ ಭಾಷೆಯಲ್ಲಿ ಮಾಟ್ ಹಿಂದಿಯಲ್ಲಿ ಮೇಥಿ, ತಮಿಳಿನಲ್ಲಿ ಮೆಂತ್ಯಂ, ತೆಲುಗಿನಲ್ಲಿ ಮೆಂತ್ಯಾಲು ಕನ್ನಡದಲ್ಲಿ ಮೆಂತ್ಯ.

ರಾಜಸ್ತಾನ, ಗುಜರಾತ್, ಉತ್ತರಾಂಚಲ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಪಂಜಾಬ್‌ಗಳಲ್ಲಿ ಮೆಂತ್ಯದ ಕಾಳನ್ನು ಹೆಚ್ಚು ಬೆಳೆಯುತ್ತಾರೆ, ಹಾಗೆಯೇ ಬಳಸುತ್ತಾರೆ. ದೇಶದ ಒಟ್ಟು ಮೆಂತ್ಯ ಉತ್ಪಾದನೆಯಲ್ಲಿ ಶೇಕಡಾ 80ರಷ್ಟು ಮೆಂತ್ಯ ರಾಜಸ್ತಾನದಿಂದಲೇ ಬರುತ್ತದೆ.

ಆರೋಗ್ಯ ವೈವಿಧ್ಯ

ಮೆಂತ್ಯ ಸೊಪ್ಪು ಮತ್ತು ಬೀಜ ಆಹಾರಕ್ಕೆ ಎಷ್ಟು ಬಳಕೆಯಾಗುತ್ತದೋ ಔಷಧಿಯಾಗಿಯೂ ಅಷ್ಟೇ ಉಪಯೋಗವಾಗುತ್ತದೆ. ಏಕೆಂದರೆ ಸಮತೋಲನ ಆಹಾರದಲ್ಲಿ ಇರಬೇಕಾದ ಬಹುತೇಕ ಅಂಶಗಳು ಮೆಂತ್ಯ ಸೊಪ್ಪಿನಲ್ಲಿವೆ. ವಿಟಮಿನ್ ಎ, ಬಿ, ಖನಿಜಾಂಶ, ಕಬ್ಬಿಣದ ಅಂಶ ಹೇರಳವಾಗಿ ಇರುವುದರಿಂದ ದೈಹಿಕ ತೊಂದರೆಗಳನ್ನು ಕಡಿಮೆ ಮಾಡುವಲ್ಲಿ ಈ ಸೊಪ್ಪು ಸಹಾಯಕ.

ಮಧುಮೇಹದಿಂದ ಬಳಲುತ್ತಿರುವವರಿಗೆ ವೆುಂತ್ಯ ಸೊಪ್ಪು ಔಷಧಿಯಂತೆ ಕಾರ್ಯ ನಿರ್ವಹಿಸುತ್ತದೆ. ಮೆಂತ್ಯದ ಕಾಳು ರಕ್ತದೊತ್ತಡದಿಂದ ಬಳಲುತ್ತಿರುವವರಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ನೆರವಾಗುತ್ತದೆ’ ಎನ್ನುತ್ತಾರೆ ಆಯುರ್ವೇದ ವೈದ್ಯೆ ಡಾ. ವಸುಂಧರಾ ಭೂಪತಿ.

ಮಗುವಿನ ತಾಯಿಗೆ ಎದೆ ಹಾಲು ಹೆಚ್ಚಿಸಲು ಮೆಂತ್ಯ ಹಾಕಿ ಮಾಡಿದ ಉಂಡೆ ಕೊಡುತ್ತಾರೆ. ಕೆಲವು ಹಳ್ಳಿಗಳಲ್ಲಿ ಈ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ. ಬಾಣಂತಿಯರಿಗೆ ಮೆಂತ್ಯ ದೋಸೆಯನ್ನು ಆಹಾರವಾಗಿ ಕೊಡುತ್ತಾರೆ. ಅದಕ್ಕೆ ಹಿರಿಯರು ಕೊಡುವ ಕಾರಣ `ಮೆಂತ್ಯ ಖಾದ್ಯ ತಿಂದರೆ ಸೊಂಟ ಗಟ್ಟಿಯಾಗುತ್ತದೆ’.

ಹಾಗಾಗಿ ಬಾಣಂತಿಯರು ಇರುವ ಮನೆಗಳಲ್ಲಿ ಹಿತ್ತಲಿನಲ್ಲೇ ಒಂದಿಷ್ಟು ತಾಜಾ ಮೆಂತ್ಯ ಸೊಪ್ಪನ್ನು ಬೆಳೆದುಕೊಳ್ಳುವುದು ರೂಢಿಯಲ್ಲಿದೆ. ಮೊಳಕೆ ಕಟ್ಟಿದ ಮೆಂತ್ಯದ ಕಾಳಿನ `ಉಸಲಿ’ ಬಹು ಜನಪ್ರಿಯ. ಮೆಂತ್ಯದ ಸೊಪ್ಪಿನೊಂದಿಗೆ ಮಸಾಲೆ ಹಾಕಿ ಮಾಡುವ `ಪರಾಠ’ ಸಹ ಬೇಡಿಕೆಯುಳ್ಳ ತಿಂಡಿ. ಮೇಥಿ ಕಾಖರ’ ದೂರ ಪ್ರಯಾಣಕ್ಕೆ ನೆರವಾಗುವ ಕುರು ಕುರು ತಿಂಡಿ.

ಬೇಳೆಗಳೊಡನೆ ಬೆರೆಸಿ ಮಾಡುವ `ಮೆಂತ್ಯದ ಹಿಟ್ಟು’ ಅತಿ ಹೆಚ್ಚು ಪ್ರೊಟೀನ್ ಕೊಡುವಂತಹುದು. ಹುಣಿಸೆಹಣ್ಣು, ಬೆಲ್ಲ ಬೆರೆಸಿ ಮಾಡುವ `ಗೊಜ್ಜು’ ಅತ್ಯಂತ ಆರೋಗ್ಯಕರವಾದ ಪದಾರ್ಥ. ಕಡಲೆಬೇಳೆ ಜೊತೆಯಲ್ಲಿ ಮೆಂತ್ಯದ ಸೊಪ್ಪು, ಮಸಾಲೆ ಹಾಕಿ ಮಾಡುವ `ಮಾಟ್ ವಡಿ’ ಪಲ್ಯ ಉತ್ತರ ಕನ್ನಡದವರ ಅಚ್ಚುಮೆಚ್ಚಿನ ತಿಂಡಿ. ಮೆಂತ್ಯ ಸೊಪ್ಪಿನಿಂದ ಭಾತ್, ಸೂಪ್, ಪನ್ನೀರ್ ಕರಿ, ಪಲ್ಯಗಳನ್ನು ತಯಾರಿಸಲಾಗುತ್ತದೆ.

ಬಳಕೆಯ ವೈವಿಧ್ಯ ಹಸಿ ಮೆಂತ್ಯದ ಕಾಳಿನಲ್ಲಿ ಪರಿಮಳ ಇರುವುದಿಲ್ಲ. ಈ ಕಾಳುಗಳನ್ನು ಹುರಿದಾಗ ಮಾತ್ರ ಪರಿಮಳ ಹೊಮ್ಮುತ್ತದೆ. ಮೆಂತ್ಯದ ಸೊಪ್ಪಾದರೂ ಅಷ್ಟೆ. ಕೊಯ್ಲು ಮಾಡಿದ ಕೂಡಲೇ ಉಪಯೋಗಿಸಬೇಕು. ಮನೆಯಲ್ಲೇ ಮೆಂತ್ಯ ಬೆಳೆಸಿದರೆ ನಮಗೆ ಬೇಕಾದಾಗ, ಬೇಕಾದಷ್ಟು ಕಿತ್ತು ತಾಜಾ ಆಗಿ ಉಪಯೋಗಿಸಬಹುದು.

ಹೆಚ್ಚಾಗಿ ಬೆಳೆದ ಸೊಪ್ಪನ್ನು ನಿರ್ಜಲೀಕರಿಸಿ ದಾಸ್ತಾನು ಮಾಡುತ್ತಾರೆ. ಇದು ಖಸೂರಿ ಮೇಥಿ ಎಂಬ ಹೆಸರಿನಿಂದ ಮಾರಾಟವಾಗುತ್ತದೆ. ಪಾಕಿಸ್ತಾನದ ಖಸೂರ್‌ನಿಂದ ಬರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಉತ್ತರ ಭಾರತದಲ್ಲಿ ಇದು ಬಹು ಜನಪ್ರಿಯ. ಸ್ವಲ್ಪ ಕಹಿ ಇರುವುದರಿಂದ ಪ್ರಾಯಶಃ ನಮ್ಮಲ್ಲಿ ಬೇಡಿಕೆ ಇಲ್ಲ. ಮೆಂತ್ಯದ ಸೊಪ್ಪನ್ನು ಬೇಯಿಸುವಾಗ, ಸೊಪ್ಪಿನ ಮೇಲೆ ನೀರು ಚಿಮುಕಿಸಿದರೆ ಕಹಿ ಹೆಚ್ಚಾಗುತ್ತದೆ. ನೀರು ಹಾಕದೇ ಸಣ್ಣ ಉರಿಯಲ್ಲಿ ಬೇಯಿಸುವುದರಿಂದ ಕಹಿ ಕಡಿಮೆಯಾಗುತ್ತದೆ.

ಇಷ್ಟೆಲ್ಲ ಔಷಧದ ಗುಣವಿರುವ ಮೆಂತ್ಯ ಸೊಪ್ಪು ಮತ್ತು ಕಾಳನ್ನು ವಾರದಲ್ಲಿ ಒಮ್ಮೆಯಾದರೂ ಬಳಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎನ್ನುವುದು ಆಹಾರ ತಜ್ಞರ ಸಲಹೆ. ಹಾಗಾಗಿ, ಕೆಲವು ಪದಾರ್ಥಗಳಿಗಷ್ಟೇ ಬಳಸುತ್ತಿರುವ ಮೆಂತ್ಯ ಕಾಳನ್ನು ಸಣ್ಣ ಡಬ್ಬದಿಂದ ದೊಡ್ಡ ಡಬ್ಬಕ್ಕೆ ರವಾನಿಸಿ. ದಂಟಿನ ಸೊಪ್ಪಿಗೆ ನೀಡುವ ಪ್ರಾಶಸ್ತ್ಯವನ್ನು ಮೆಂತ್ಯ ಸೊಪ್ಪಿಗೂ ನೀಡಿ.

ಸೌಂದರ್ಯ ಸಾಧನವಾಗಿ ಬರೀ ಅಡುಗೆಗಷ್ಟೇ ಅಲ್ಲದೆ ಸೌಂದರ್ಯ ಸಾಧನಗಳಲ್ಲೂ ಮೆಂತ್ಯ ಬಳಸಲಾಗುತ್ತದೆ. ಬೀಜವನ್ನು ನೆನೆಸಿ ರುಬ್ಬಿದ ಮೆಂತ್ಯದ ಪೇಸ್ಟ್‌ನ್ನು ತಲೆಗೂದಲಿಗೆ ಹಚ್ಚಬೇಕು. ಅರ್ಧಗಂಟೆಯ ನಂತರ ಬಿಸಿನೀರಿನಲ್ಲಿ ತೊಳೆದರೆ, ಕೂದಲು ನುಣುಪಾಗಿ ಹೊಳೆಯುತ್ತದೆ.

ಮೊಳಕೆ ಕಟ್ಟಿದ ಮೆಂತ್ಯವನ್ನು ನೆರಳಲ್ಲಿ ಒಣಗಿಸಿ, ಕೊಬ್ಬರಿ ಎಣ್ಣೆಗೆ ಹಾಕಿ ಕಾಯಿಸಿ ನಿಯಮಿತವಾಗಿ ಈ ಎಣ್ಣೆ ಹಚ್ಚುತ್ತಿದ್ದರೆ, ಕೂದಲು ಕಪ್ಪಾಗಿ ಹೊಳಪಿನಿಂದ ಕೂಡಿರುತ್ತದೆ ಎನ್ನುತ್ತಾರೆ ಹರ್ಬಲ್ ಬ್ಯೂಟಿಷಿಯನ್ಸ್. ಮೆಂತ್ಯದ ಸೊಪ್ಪಿನ ರಸಕ್ಕೆ ನಿಂಬೆ ರಸ ಸೇರಿಸಿ, ಊತ ಬಂದಿರುವ ಜಾಗಕ್ಕೆ ಹಚ್ಚಿದರೆ ಬಹು ಬೇಗ ಊತ ಕಡಿಮೆಯಾಗುತ್ತದೆ ಎಂಬುದು ನಾಟಿ ವೈದ್ಯರ ಅಭಿಪ್ರಾಯ.

ರಮಾ ಎಸ್. ಅರಕಲಗೂಡು.

2 COMMENTS

LEAVE A REPLY

Please enter your comment!
Please enter your name here