ಗೋಧಿ ಹಿಟ್ಟಿನ ಶಿರಾ. ಮಾಡುವುದು ಸುಲಭ ಹಾಗೂ ತಿನ್ನಲು ರುಚಿಯಾದದ್ದು. ಮನೆಯಲ್ಲಿ ಆಕಸ್ಮಿಕವಾಗಿ ನೆಂಟರ ಆಗಮನವಾದಾಗ ಟೀ ಅಥವಾ ಕಾಫಿಯ ಜೊತೆ ತಿನ್ನಲು ಏನು ಕೊಡಬೇಕೆಂದು ಸ್ವಲ್ಪ ಕಸ್ಸಿವಿಸಿಯಾಗುತ್ತದೆ. ಅಲ್ಲಿ ಇಲ್ಲಿ ಹುಡುಕುವ ಬದಲು ಆ ಸಮಯದಲ್ಲಿ ಕೇವಲ 10 ನಿಮಿಷದಲ್ಲಿ ಮಾಡುವಂತಹ ಸಿಹಿಯನ್ನು ಹೇಳುತ್ತಿದ್ದೇವೆ. ತಿನ್ನಲು ರುಚಿ ಹಾಗೂ ಮಾಡಲು ಬಹಳ ಸುಲಭ. ಮಾಡಿ ನೋಡಿ. ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು 1 ಕಪ್ ಸಕ್ಕರೆ 2 ಕಪ್ ಹಾಲು ಅರ್ದ ಕಪ್ ನೀರು ಅರ್ದ ಕಪ್ ಯಾಲಕ್ಕಿ ಪುಡಿ 1 ಚಮಚ ದ್ರಾಕ್ಷಿ, ಗೋಡಂಬಿ ಸ್ವಲ್ಪ ತುಪ್ಪ 1 ಕಪ್
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಹಾಲು ಮತ್ತು ನೀರು ಸೇರಿಸಿ ಬಿಸಿಮಾಡಿಕೊಳ್ಳಬೇಕು.
ಇನ್ನೊ೦ದು ಬಾಣಲಿಯಲ್ಲಿ ಒಂದು ಕಪ್ ತುಪ್ಪ ಹಾಕಿ, ಅದು ಬಿಸಿಯಾದ ನಂತರ ಒಂದು ಕಪ್ ಗೋಧಿ ಹಿಟ್ಟು ಹಾಕಿ ಹುರಿಯಬೇಕು. ಗೋಧಿ ಹಿಟ್ಟು ಕೆಂಪಗೆ ಆಗುವವರೆಗೆ ಸಣ್ಣ ಉರಿಯಲ್ಲಿ ಹುರಿಯಬೇಕು.
ನಂತರ ಬಿಸಿಯಾದ ಹಾಲನ್ನು ಗೋಧಿ ಹಿಟ್ಟಿಗೆ ಹಾಕಿ ಬಾಣಲಿಗೆ ಮುಚ್ಚಳವನ್ನು ಮುಚ್ಚಬೇಕು.
ಎರಡು ನಿಮಿಷ ಬೇಯಲು ಬಿಟ್ಟು ನಂತರ ಅದಕ್ಕೆ ಎರಡು ಕಪ್ ಸಕ್ಕರೆ ಹಾಕಿ ಕೈ ಆಡಿಸುತ್ತಿರಬೇಕು.
ಮಿಶ್ರಣ ಗಟ್ಟಿ ಆಗುತ್ತಾ ಬಂದ ಹಾಗೆ ಅದಕ್ಕೆ ದ್ರಾಕ್ಷಿ ಮತ್ತು ಗೋಡಂಬಿ ಹಾಗೂ ಯಾಲಕ್ಕಿ ಪುಡಿ ಸೇರಿಸಬೇಕು..
ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಉರಿಯನ್ನು ಆರಿಸಿ ಐದು ನಿಮಿಷ ಬಿಡಬೇಕು.
ಈಗ ಬಿಸಿಬಿಸಿ ಶಿರಾ ರುಚಿ ನೋಡಲು ರೆಡಿ.