ಈರುಳ್ಳಿ ಪಕೋಡ ಮಾಡೋದು ಸುಲಭ

0
1239

ಹೋಟೆಲ್‌ನಲ್ಲಿ ಇರೋ ಈರುಳ್ಳಿ ಪಕೋಡಕ್ಕೆ ಏಕೆ ಅಷ್ಟೊಂದು ರುಚಿ ಈ ಪ್ರಶ್ನೆಯನ್ನು ಹಲವರಿಂದ ಕೇಳಿದ್ದೇನೆ. ನನ್ನ ಮನೆಗೆ ಬರುವ ಅತಿಥಿಗಳಿಂದಲೂ ಸಹ. ಸುಮ್ಮನೆ ಇದನ್ನು ಯೋಚಿಸ್ತಿದ್ದಾಗ ಗರಂ ಗರಿಮುರಿ ಪಕೋಡ ಮಾಡೋಣ ಅನ್ನಿಸ್ತು. ಅದಕ್ಕೇ ಈ ರೆಸಿಪಿ ಹಾಕ್ತೀದ್ದೀನಿ. ಮಾಡಿದ್ಮೇಲೆ ಪ್ರತಿಕ್ರಿಯಿಸಿ.

ಈರುಳ್ಳಿ ಪಕೋಡಕ್ಕೆ ಬಳಸುವ ಸಾಮಾನು : ಈರುಳ್ಳಿ, ಕರಿಬೇವಿನಸೊಪ್ಪು, ಹಸಿಮೆಣಸು, ಹತ್ತು ಕಾಲು ಕೊತ್ತಂಬರಿ ಬೀಜ, ಕಡಲೆಹಿಟ್ಟು, ಸ್ವಲ್ಪ ಎಣ್ಣೆ, ಕರಿಯಲು ಅಗತ್ಯವಿರುವ ಎಣ್ಣೆ, ಉಪ್ಪು ಹಾಕಬೇಕಾದದ್ದು ಗೊತ್ತೇ ಇದೆಯಲ್ಲ.

ಮನೆಯಲ್ಲಿ ಮೂವರಿದ್ದರೆ ದೊಡ್ಡ ಗಾತ್ರದ ನಾಲ್ಕೈದು ಈರುಳ್ಳಿಗಳು ಸಾಕು. ಅದನ್ನು ಎರಡು ಭಾಗ ಮಾಡಿಕೊಂಡು, ಉದ್ದುದ್ದ ಕತ್ತರಿಸಬೇಕು. ಅದು ತೆಳ್ಳಗಿದ್ದಷ್ಟೂ ಪಕೋಡ ಚೆನ್ನಾಗಿ ಬರುತ್ತದೆ. ಕೂದಲಿನಷ್ಟು ತೆಳ್ಳಗಿದ್ದರೆ ಪಕೋಡದ ನಾಜೂಕುತನ ಅರಿವಾಗಬಹುದು. ಹಸಿಮೆಣಸೂ ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಚಿಕ್ಕದಾದಷ್ಟೂ ತಿನ್ನುವಾಗ ಖಾರದ ಕಿರಿಕಿರಿಯಾಗದು. ಹುಷಾರ್, ಕೈ ಕೊಯ್ಯಿಕೊಂಡಿದ್ದೀರಿ !

ಹಾಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸನ್ನು ಹಿಟ್ಟು ಕಲೆಸುವ ಪಾತ್ರಕ್ಕೆ ಸುರಿದುಕೊಂಡು, ಕಾಯಲು ಒಲೆಯ ಮೇಲಿಟ್ಟ ಎಣ್ಣೆಯನ್ನು ಸ್ವಲ್ಪ ಎಂದರೆ ಐದಾರು ಚಮಚ ಹಾಕಿಕೊಂಡು ನಾದಬೇಕು. ಬರೀ ಈರುಳ್ಳಿಯನ್ನು ನಾದಿದಾಗ ಅದರೊಳಗಿನ ವಲಯವೆಲ್ಲಾ ಬಿಟ್ಟುಕೊಂಡು ಈರುಳ್ಳಿಯ ಪ್ರತಿ ಬಿಲ್ಲೆಗಳೂ ನೂಲಿನ ಎಳೆಯಂತೆ ಬೇರೆ ಬೇರೆಯಾಗುತ್ತವೆ. ಆಗ ಕೊತ್ತಂಬರಿ ಕಾಳನ್ನು ಕೈಯಲ್ಲೇ ಚೆನ್ನಾಗಿ ತಿಕ್ಕಿ ಹಾಕಿಕೊಳ್ಳಿ. ಉಪ್ಪು ಮಿಶ್ರಣ ಮಾಡಿಕೊಳ್ಳಿ. ನಂತರ ಸಣ್ಣ ಸಣ್ಣ ಗುಂಪನ್ನು ಮಾಡಿಕೊಳ್ಳಿ ಅಥವಾ ಒಂದು ಭಾಗವನ್ನು ಪ್ರತ್ಯೇಕವಾಗಿರಿಸಿಕೊಳ್ಳಿ.

ಎಣ್ಣೆ ಕಾವು ಬಂದಿದೆಯೇ ನೋಡಿಕೊಂಡು ತೀರಾ ಹೆಚ್ಚಿನ ಕಾವಿದ್ದರೆ ಕಷ್ಟ ಪ್ರತ್ಯೇಕವಾಗಿರಿಸಿಕೊಂಡ ಭಾಗದ ಮೇಲೆ ಕಡಲೆಹಿಟ್ಟನ್ನು ಸಿಂಪಡಿಸುವಂತೆ ಹಾಕಬೇಕು. ಐದು ಈರುಳ್ಳಿಗಳ ಪಕೋಡಕ್ಕೆ ಸುಮಾರು ೧೫೦ ರಿಂದ ೧೭೫ ಗ್ರಾಂ ಕಡಲೆ ಹಿಟ್ಟು ಸಾಕು. ಒಮ್ಮೆಲೆ ಸುರಿದು ಕಲೆಸಲು ಹೋಗಬಾರದು. ಜತೆಗೆ ಹಿಟ್ಟು ಹಾಕಿದ ಮೇಲೆ ನಾದಲೂ ಹೋಗಬಾರದು. ಹಿಟ್ಟು ಸಿಂಪಡಿಸಿ ಮೆಲ್ಲಗೆ ನಾಜೂಕಿನಿಂದ ಎಣ್ಣೆಗೆ ಬಿಡುತ್ತಾ ಬರಬೇಕು. ಉಳಿದ ಈರುಳ್ಳಿಗೂ ಹಾಗೆಯೇ ಮಾಡಬೇಕು. ಕೆಂಪನೆಯ ಬಣ್ಣಕ್ಕೆ ಬಂದ ಮೇಲೆ ತೆಗೆಯಬಹುದು. ಕೊನೆಗೆ ಬರೀ ಕರಿಬೇವುಗಳನ್ನು ಕರೆದು ಅದರ ಮೇಲೆ ಅಲಂಕರಿಸಿದರೆ ಈರುಳ್ಳಿ ಪಕೋಡ ರೆಡಿ.
ಇದು ಸಲ್ಲದು : ಸಾಮಾನ್ಯವಾಗಿ ಎಲ್ಲರೂ ಮಾಡುವುದೆಂದರೆ ಈರುಳ್ಳಿಯೊಂದಿಗೆ ಕಡಲೆಹಿಟ್ಟು ಎಲ್ಲದರಂತೆ ಕಲೆಸಿಬಿಡುತ್ತಾರೆ. ಇನ್ನು ಕೆಲವರು ಅದಕ್ಕೆ ನೀರು ಬೆರೆಸಿ ಕಲೆಸುತ್ತಾರೆ. ಅದೂ ಸಲ್ಲದು. ಇದರಿಂದ ಪಕೋಡ ಗಟ್ಟಿಯಾಗುತ್ತದೆ. ಗರಿಮುರಿ ಬರದು.

LEAVE A REPLY

Please enter your comment!
Please enter your name here