ಮಂಗಳೂರಿನ ಕದ್ರಿ ದೇವಾಲಯದ ಮಹಿಮೆ

0
1540

ದಕ್ಷಿಣ ಭಾರತ ದೇವಸ್ಥಾನಗಳ ತವರೂರು. ಇಲ್ಲಿ ರಾಜರ ಕಾಲದಿಂದಲೇ ನಿರ್ಮಿತವಾದ ಅನೇಕ ದೇವಸ್ಥಾನಗಳು ಪ್ರಸಿದ್ಧಿ. ಸುಂದರ ಕೆತ್ತನೆಗಳಿಂದ ನಿರ್ಮಿತವಾದ ದೇವಸ್ಥಾ ನಗಳು ಆಕರ್ಷಕ, ನಯನ ಮನೋಹರ. ಅವುಗಳ ಬಗೆಗಿನ ದಂತಕತೆಗಳು, ಐತಿಹ್ಯಗಳು ಇನ್ನೂ ರೋಚಕ.

ಸುತ್ತ ಹಸಿರು ಕಾನನ, ಅದರ ಮಧ್ಯೆ ದೇವಸ್ಥಾನ, ದೇವಸ್ಥಾನದ ಹಿಂಬದಿ ದೊಡ್ಡ ಗುಡ್ಡ, ಆ ಗುಡ್ಡಕ್ಕೆ ನೂರೆಂಟು ಮೆಟ್ಟಿಲುಗಳು. ಮೆಟ್ಟಿಲು ಏರುತ್ತಾ ಹೋದಂತೆ ಸುತ್ತಲೂ ಕಾಣುವ ಮಂಗಳೂರು ನಗರ, ಅಲ್ಲಿನ ಕಾಂಕ್ರೀಟ್ ಕಟ್ಟಡಗಳು ಹೀಗೆ ಸಾಗುತ್ತಾ ಹೋದಂತೆಲ್ಲಾ ಪ್ರಕೃತಿ ಸೌಂದರ್ಯದ ಜತೆಗೆ ಅಲ್ಲಿಯೇ ಒಂದಷ್ಟು ಹೊತ್ತು ಕಾಲ ಕಳೆಯುವ ಮನಸ್ಸಾಗುವುದು.

ಕದ್ರಿ ದೇವಸ್ಥಾನದ ಆಸುಪಾಸಿನಲ್ಲಿ ಒಂದು ಸುತ್ತು ಹಾಕಿದರೆ ಗುಡ್ಡದಲ್ಲಿರುವ ಜೋಗಿ ಮಠ, ಹನುಮಂತನ ಮೂರ್ತಿ, ದುರ್ಗಾದೇವಿ ಮಂದಿರ, ರಾಮ-ಲಕ್ಷ್ಮಣನ ತೀರ್ಥ ಹೀಗೆ ಸುತ್ತಲೂ ಪುರಾಣದ ಕಥೆಗಳನ್ನು ಹೇಳುವ ಹಲವು ಚಾರಿತ್ರಿಕ ಸ್ಥಳಗಳು ಕಂಡು ಬರುತ್ತವೆ. ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನ 10-11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂಬುದನ್ನು ಚರಿತ್ರೆ ಹೇಳುತ್ತದೆ. ಈ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಮಂಜುನಾಥ ಸ್ವಾಮಿಯ ಮೂರ್ತಿ ದಕ್ಷಿಣ ಭಾರತದಲ್ಲಿಯೇ ಪುರಾತನವಾದದ್ದು.

ಹಿಂದೆ ಪರಶುರಾಮರು ತಮ್ಮ ತಂದೆ ಕಶ್ಯಪ ಮುನಿಗಳಿಗೆ ತೊಂದರೆಮಾಡಿದ ಕ್ಷ$ತ್ರಿಯ ರಾಜರೆಲ್ಲರನ್ನೂ ವಧಿಸಿ, ಪ್ರಾಯಶ್ಚಿತ ಮಾಡಿಕೊಳ್ಳಲು ತಪ್ಪಸ್ಸನ್ನಾಚರಿಸಲು ಸೂಕ್ತವಾದ ಸ್ಥಳದ ಹುಡುಕಾಟ ನಡೆಸುತ್ತಿದ್ದಾಗ, ಶಿವನು ಕದಳಿವೃಕ್ಷಗಳಿಂದ ಕೂಡಿದ ಈ ಕದ್ರಿ ಕ್ಷೇತ್ರವೇ ನಿನ್ನ ತಪ್ಪಸ್ಸಿಗೆ ಸೂಕ್ತ ತಾಣವೆಂದು ದಾರಿ ತೋರಿದನಂತೆ. ಪರಶುರಾಮ ತಪಸ್ಸನ್ನಾಚರಿಸಲು ಈ ಕ್ಷೇತ್ರಕ್ಕೆ ಬಂದಾಗ ಇಲ್ಲಿನ ಪ್ರದೇಶವನ್ನು ಸಮುದ್ರ ಸಂಪೂಣರ್ವಾಗಿ ಆವರಿಸಿಕೊಂಡಿತ್ತಂತೆ. ಆಗ ಪರಶುರಾಮರು ನಮ್ರತೆಯಿಂದ ಸಮುದ್ರ ರಾಜನಿಗೆ ಕದಳಿವನದಲ್ಲಿ ತಪ್ಪಸ್ಸನ್ನಾಚರಿಸಲು ಸ್ವಲ್ಪ ಜಾಗ ನೀಡಬೇಕೆಂದು ಕೇಳಿಕೊಂಡಾಗ ಸಮುದ್ರರಾಜ ಜಾಗ ನೀಡಲು ನಿರಾಕರಿಸಿದನಂತೆ. ಇದರಿಂದ ಕುಪಿತನಾದ ಪರಶುರಾಮರು ತಮ್ಮಲ್ಲಿರುವ ಪರಶುವನ್ನು ಸಮುದ್ರ ರಾಜನತ್ತ ಎಸೆದರು

ಆಗ ಇದಕ್ಕೆ ಹೆದರಿದ ಸಮುದ್ರರಾಜ ಕದಳಿವನದಿಂದ ಹಿಂದೆ ಸರಿದು ಪರಶುರಾಮರಿಗೆ ಈ ತಾಣವನ್ನು ಬಿಟ್ಟುಕೊಟ್ಟನೆಂಬ ಪೌರಾಣಿಕ ಹಿನ್ನೆಲೆ ಇದೆ. ನಂತರ ಪರಶುರಾಮರು ತಪ್ಪಸ್ಸನ್ನಾಚರಿಸಿದಾಗ, ಶಿವನ ಜೊತೆ ಪಾರ್ವತಿ ಕೂಡ ಪ್ರತ್ಯಕ್ಷವಾಗಿ ಈ ಕ್ಷೇತ್ರದಲ್ಲಿಯೇ ನೆಲೆಸಿದರು ಎನ್ನಲಾಗುತ್ತಿದೆ. ಇಲ್ಲಿ ಶಿವ ಮಂಜುನಾಥನ ರೂಪದಲ್ಲಿ ನೆಲೆಸಿದ್ದಾನೆ. ಹಾಗೇ ಶಿವನ ಅಣತಿಯಂತೆ ಸಪ್ತಕೋಟಿ ತೀರ್ಥಗಳು ಇಲ್ಲಿ 7 ತೀರ್ಥ ಕುಂಡಗಳಾಗಿ ನೆಲೆಸಿವೆ.

ದೇವಸ್ಥಾನದ ಹಿಂಭಾಗದಲ್ಲಿರುವ ಒಂದು ಗೋಮುಖದಿಂದ ನಿರಂತರವಾಗಿ ತೀರ್ಥ ಉದ್ಭವವಾಗಿ ಹರಿದು ಬರುತ್ತದೆ. ಅದು ಕಾಶಿ ಕ್ಷೇತ್ರದ ಭಗೀರಥಿ ನದಿಯ ತೀರ್ಥವೆಂದು ಹೇಳಲಾಗುತ್ತಿದೆ. ಈ ನೀರು ಹರಿದು ಬಂದು 9 ಪತ್ರ ಹೊಂಡಗಳಲ್ಲಿ ಶೇಖರಣೆಯಾಗುತ್ತದೆ. ಈ ಹೊಂಡಗಳಿರುವ ಜಾಗವನ್ನು ಮೋಕ್ಷ ಧಾಮವೆಂದು ಕರೆಯಲಾಗುತ್ತದೆ. ಇಲ್ಲಿ ಸುಂದರವಾದ ವಿಘ್ನೇಶ್ವರನ ವಿಗ್ರಹವಿದೆ. ಅದರ ಕೆಳಭಾಗದಲ್ಲಿರುವ ಈ ಹೊಂಡಗಳಲ್ಲಿ ಭಕ್ತಾದಿಗಳು ಮಿಂದು ನಂತರ ಅಲ್ಲಿಯೇ ಮೇಲ್ಭಾಗದಲ್ಲಿರುವ ಚಂದ್ರಮೌಳೀಶ್ವರನ ಲಿಂಗಕ್ಕೆ ಅಭಿಷೇಕ ಮಾಡಿ ನಂತರ ಶ್ರೀಮಂಜುನಾಥನ ದರ್ಶಶನ ಮಾಡುವ ವಾಡಿಕೆ ಇಲ್ಲಿದೆ.

ಇಲ್ಲಿನ ವಿಶೇಷತೆ ಇಲ್ಲಿ ಕಾರ್ತೀಕ ಮಾಸದಂದು ದೀಪೋತ್ಸವ ಹಮ್ಮಿಕೊಳ್ಳಲಾಗುತ್ತದೆ. ದೇವಸ್ಥಾನದಲ್ಲಿ ಮಚ್ಛೇಂದ್ರನಾಥ, ಗೊರಕನಾಥ, ಲೋಕೇಶ್ವರ ಮತ್ತು ಬುದ್ಧನ ವಿಗ್ರಹಗಳಿವೆ. ದೇವಸ್ಥಾನದ ಪಶ್ಚಿಮಕ್ಕೆ ದುರ್ಗಾದೇವಿ ದೇವಸ್ಥಾನ, ಉತ್ತರಕ್ಕೆ ಗಣಪತಿ ದೇವಸ್ಥಾನ ಇದೆ. ದೇವಸ್ಥಾನದಲ್ಲಿ ವರ್ಷಪೂರ್ತಿ ಹಬ್ಬಗಳು, ಉತ್ಸವಗಳು ನಡೆಯುತ್ತವೆ. ದೇವಸ್ಥಾನದಲ್ಲಿ ಗಣೇಶ ಚತುರ್ಥಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯಂದು ಧ್ವಜಾರೋಹಣ ಮಾಡಲಾಗುತ್ತದೆ. ನವರಾತ್ರಿಯಂದು ಒಂಬತ್ತು ದಿನ ಧರ್ನುಪೂಜೆ ನಡೆಯುತ್ತದೆ. ಪ್ರತಿದಿನ ಮಂಜುನಾಥನಿಗೆ ರುದ್ರಾಭಿಷೇಕ ನಡೆಯುತ್ತದೆ.

ಇಲ್ಲಿಯೇ ಇರುವ ಇನ್ನೊಂದು ಆಕರ್ಷಣೀಯ ಸ್ಥಳ ಕದ್ರಿ ಪಾರ್ಕ್. ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿದರೆ ಕದ್ರಿ ಉದ್ಯಾನವನವನ್ನು ನೋಡಬಹುದು.

ದೇಶದ ಪ್ರಮುಖ ನಗರಗಳಿಂದ ಮಂಗಳೂರಿಗೆ ಸಾಕಷ್ಟು ಬಸ್‌, ರೈಲು ಹಾಗೂ ಮಾನ ಸೌಕರ್ಯಗಳಿವೆ. ಇಲ್ಲಿಂದ ಕೇವಲ 4 ಕಿ.ಮೀ. ಅಂತರದಲ್ಲಿರುವ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಾಕಷ್ಟು ಬಸ್‌ ಹಾಗೂ ಆಟೋಗಳ ಸೌಕರ್ಯವಿದೆ.
ನೀವು ಒಮ್ಮೆ ಭೇಟಿ ನೀಡಿ ಸುಂದರವಾದ ರಮಣೀಯ ಸ್ಥಳಗಳನ್ನು ನೋಡಿ ಆನಂದಿಸಿ.

LEAVE A REPLY

Please enter your comment!
Please enter your name here