ರುಚಿ ರುಚಿಯಾಗಿ ಬಿಸಿಬೇಳೆ ಬಾತನ್ನು ಮನೆಯಲ್ಲೇ ಮಾಡಿ ತಿನ್ನಿ

0
1609

ಬಿಸಿಬೇಳೆ ಬಾತ್ ಪುಡಿ ಮಾಡುವ ವಿಧಾನ: ಬಿಸಿಬೇಳೆ ಭಾತ್ ಕರ್ನಾಟಕದ ಪ್ರಸಿದ್ಧ ಹಾಗೂ ವಿಶಿಷ್ಟವಾದ ಆರೋಗ್ಯಕರವಾದ ಖಾಧ್ಯವಿದು. ಮನೆಯಲ್ಲಿ ಯಾವುದಾದರೂ ಕಾರ್ಯಕ್ರಮಗಳಿದ್ದಾಗ ಅಥವಾ ಮನೆಗೆ ಅತಿಥಿಗಳು ಬಂದಾಗ ಅಕ್ಕಿ, ಬೇಳೆ, ತರಕಾರಿ, ಕಾಳು ಹೀಗೆ ಎಲ್ಲವನ್ನೂ ಬಳಸಿ ಸ್ವಾದಿಷ್ಟವಾಗಿ, ಆರೋಗ್ಯಕರವಾಗಿ, ಮಾಡುವಂತಹ ಅಡುಗೆಯಲ್ಲಿ ಬಿಸಿಬೇಳೆ ಬಾತ್ ಬಹಳ ರುಚಿಕರವಾದದ್ದು ಹಾಗೂ ಪ್ರಮುಖವಾದದ್ದು.

ಬೇಕಾಗುವ ಪದಾರ್ಥಗಳು:
 1. ಕಡಲೆ ಬೇಳೆ- 4 ಚಮಚ
 2. ಉದ್ದಿನ ಬೇಳೆ- 4 ಚಮಚ
 3. ಬ್ಯಾಡಗಿ ಮೆಣಸಿನ ಕಾಯಿ- 8-10
 4. ದನಿಯ- 2 ಚಮಚ
 5. ಜೀರಿಗೆ- ಅರ್ಧ ಚಮಚ
 6. ಮೆಂತ್ಯೆ- ಕಾಲು ಚಮಚ
 7. ದಾಲ್ಚಿನ್ನಿ- 3-4 ತುಂಡುಗಳು
 8. ಮೊಗ್ಗು- 1-2
 9. ಕಾಳು ಮೆಣಸು- ಅರ್ಧ ಚಮಚ
 10. ಕರಿಬೇವಿನ ಸೊಪ್ಪು- 2 ದಂಟು

ಮಾಡುವ ವಿಧಾನ:

ಫ್ರೈಯಿಂಗ್ ಪ್ಯಾನ್‍ನ್ನು ಸ್ಟವ್ ಮೇಲಿಟ್ಟು, ಕಡಲೆಬೇಳೆ ಮತ್ತು ಉದ್ದಿನಬೇಳೆಯನ್ನು ಬೇರೆ ಬೇರೆಯಾಗಿ ಎಣ್ಣೆ ಹಾಕದೆ ಸಣ್ಣ ಉರಿಯಲ್ಲಿ ಕೆಂಪಗಾಗುವವರೆಗೆ ಹುರಿದು ತೆಗೆದಿಡಿ. ನಂತರ ಬ್ಯಾಡಗಿ ಮೆಣಸಿನ ಕಾಯಿಯ ಹೊರತಾಗಿ ಒಂದೊಂದೇ ಪದಾರ್ಥವನ್ನು ಹಾಕಿಕೊಳ್ಳುತ್ತಾ ಸಣ್ಣ ಉರಿಯಲ್ಲಿ ಹುರಿದುಕೊಂಡು ತೆಗೆದಿಡಿ. ಈಗ ಪ್ಯಾನ್‍ಗೆ ನಾಲ್ಕು ಹನಿ ಎಣ್ಣೆ ಹಾಕಿ ಬ್ಯಾಡಗಿ ಮೆಣಸಿನ ಕಾಯಿಯನ್ನು ಕೆಂಪಗಾಗಿ, ಗರಿಗರಿಯಾಗುವವರೆಗೆ ಹುರಿಯಿರಿ.

ಹುರಿದ ಪದಾರ್ಥಗಳೆಲ್ಲಾ ತಣಿದಾಗ, ಮಿಕ್ಸರ್ ಡ್ರೈ ಜಾರ್‍ಗೆ ಹಾಕಿ ನುಣ್ಣಗೆ ಪುಡಿ ಮಾಡಿ ಗಾಳಿ ಹೋಗದಂತೆ ಬಾಕ್ಸ್ ಗೆ ಹಾಕಿ ತೆಗೆದಿಡಿ. ಬಿಸಿಬೇಳೆ ಬಾತ್ ಮಡುವಾಗ ಈ ಪುಡಿಯನ್ನು ಉಪಯೋಗಿಸಿಕೊಳ್ಳಬಹುದು.

ಈ ಪ್ರಮಾಣದಲ್ಲಿ ಮಾಡಿದ ಬಾತ್ ಅನ್ನು ಕೇವಲ ಎರಡು ಸಲ ಮಾಡಬಹುದು. ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀವು ಮನೆಯಲ್ಲೇ ತಯಾರಿಸಿ ಇಟ್ಟುಕೊಳ್ಳಬಹುದು.

ಬೇಕಾಗುವ ಪದಾರ್ಥಗಳು:

 1. ಅಕ್ಕಿ- 1 ಕಪ್
 2. ತೊಗರಿಬೇಳೆ- ಅರ್ಧ ಕಪ್
 3. ಬೀನ್ಸ್- 10-15
 4. ಕ್ಯಾರೆಟ್- 2
 5. ಬಟಾಣಿ- 1 ಹಿಡಿ
 6. ಈರುಳ್ಳಿ- 1 ದೊಡ್ಡದು
 7. ಟೊಮೊಟೊ- 1
 8. ಬಿಸಿಬೇಳೆಬಾತ್ ಪುಡಿ- 6-7 ಚಮಚ
 9. ಹುಣಸೆ ಹಣ್ಣು- ಚಿಕ್ಕ ನಿಂಬೆ ಗಾತ್ರ
 10. ಬೆಲ್ಲದ ಪುಡಿ- ಒಂದು ಚಮಚ
 11. ಕೊಬ್ಬರಿ ತುರಿ- 1 ಹಿಡಿ
 12. ಎಣ್ಣೆ- 4-5 ಚಮಚ
 13. ಸಾಸಿವೆ ಕಾಳು- ಕಾಲು ಚಮಚ
 14. ಅರಿಶಿನ- ಕಾಲು ಚಮಚ
 15. ಗೋಡಂಬಿ (ಬೇಕೆಂದಲ್ಲಿ) 7-8
 16. ಉಪ್ಪು -ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಮೊದಲು ಸ್ವಲ್ಪ ಬಿಸಿ ನೀರಿಗೆ ಹುಣಸೆ ಹಣ್ಣನ್ನು ಹಾಕಿ ಚೆನ್ನಾಗಿ ಕಿವುಚಿ ಅದರ ರಸ ತೆಗೆದಿಟ್ಟುಕೊಳ್ಳಿ. ತರಕಾರಿಯನ್ನು ಹೆಚ್ಚಿಟ್ಟುಕೊಂಡಿರಿ. ಒಣ ಬಟಾಣಿಯಾದಲ್ಲಿ ಮೊದಲೇ ನೆನೆಸಿಟ್ಟುಕೊಂಡಿರಿ. ಕೊಬ್ಬರಿಯನ್ನು ತುರಿದುಕೊಳ್ಳಿ.
ಕುಕ್ಕರ್‍ಗೆ ಒಂದು ಬಟ್ಟಲಿನಲ್ಲಿ ಅಳೆದಿಟ್ಟುಕೊಂಡ ತೊಳೆದ ಅಕ್ಕಿ, ಬೇಳೆ ಹಾಗೂ ಬಟಾಣಿ-ತರಕಾರಿಗಳನ್ನೂ ಹಾಕಿ ಅದಕ್ಕೆ 5-6 ಲೋಟ ನೀರು ಸೇರಿಸಿ ಎರಡು ಹನಿ ಎಣ್ಣೆ, ಚಿಟಕಿ ಅರಿಶಿನವನ್ನು ಹಾಕಿ ಮೂರು ವಿಷಲ್ ಕೂಗಿಸಿ.

ಈಗ ಸ್ಟವ್ ಮೇಲೆ ಫ್ರೈಯಿಂಗ್ ಪ್ಯಾನ್ ಇಟ್ಟು ಅದಕ್ಕೆ 4-5 ಚಮಚ ಎಣ್ಣೆ ಹಾಕಿ ಅದು ಕಾದಾಗ ಸಾಸಿವೆ ಕಾಳು ಹಾಕಿ. ಅದು ಸಿಡಿದಾಗ ಬೇಕೆಂದಲ್ಲಿ ಗೋಡಂಬಿಯನ್ನು ಹಾಕಿ ಹೆಚ್ಚಿಕೊಂಡ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, ಹೆಚ್ಚಿದ ಟೊಮೊಟೊ ಹಾಕಿ ಫ್ರೈ ಮಾಡಿ. ನಂತರ ಕುಕ್ಕರ್‍ನಲ್ಲಿ ಬೆಂದ ಪದಾರ್ಥಗಳನ್ನು ಹಾಕಿ. ಈಗ ಹುಳಿ ರಸ, ಉಪ್ಪು, ಬೆಲ್ಲ ಹಾಕಿ ಕೈ ಮಗುಚಿ. ಫ್ರೆಷ್ ಆಗಿ ಮಾಡಿಕೊಂಡ ಬಿಸಿಬೇಳೆ ಪುಡಿಯನ್ನು 6-7 ಚಮಚದಷ್ಟು ಹಾಕಿ, ಕೊಬ್ಬರಿ ತುರಿಯನ್ನೂ ಹಾಕಿ. ಸ್ವಲ್ಪ ನೀರು ಸೇರಿಸಿ, ಚೆನ್ನಾಗಿ ಕುದಿಸಿ, ಸ್ಟವ್ ಆರಿಸಿ. ಸ್ವಾದಿಷ್ಟವಾದ, ರುಚಿಕರ ಬಿಸಿಬೇಳೆ ಬಾತ್ ಸವಿಯಲು ಸಿದ್ಧ.

ಈ ಬಿಸಿಬೇಳೆ ಬಾತಿಗೆ ಎರಡು ಚಮಚ ತುಪ್ಪ  ಮತ್ತು ಖಾರ ಬೂಂದಿ ಹಾಕಿ ರಾಯ್ತದೊಂದಿಗೆ ತಿಂದರೆ ತುಂಬಾ ರುಚಿ.

ಈ ಮೇಲೆ ತಿಳಿಸಿದ ಪ್ರಮಾಣದಲ್ಲಿ ಮಾಡಿದ ಬಿಸಿಬೇಳೆ ಬಾತನ್ನು ೪ ರಿಂದ ೫ ಜನರು ತಿನ್ನಬಹುದು.

LEAVE A REPLY

Please enter your comment!
Please enter your name here