ಗೋಕರ್ಣ ಕ್ಷೇತ್ರ ಶಿವನ ಪಂಚ ಕ್ಷೇತ್ರಗಳಲ್ಲಿ ಒಂದು..

0
1166

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕು ಸಮುದ್ರದ ದಂಡೆಯ ಮೇಲಿರುವ ಗೋಕರ್ಣ ಮಹಾಬಲೇಶ್ವರನ ಸನ್ನಿಧಿಯು ಒಂದು ಪುರಾಣ ಪ್ರಸಿದ್ಧ ಕ್ಷೇತ್ರ. ಇದು ಭೂಕೈಲಾಸ, ಪರಶುರಾಮ ಭೂಮಿ ಎಂಬ ಹೆಸರುಗಳನ್ನು ಹೊಂದಿದೆ. ಶಿವನ ಪಂಚ ಕ್ಷೇತ್ರಗಳಲ್ಲಿ ಒಂದು.

ಗೋಕರ್ಣದ ಒಂದು ಬದಿಯಲ್ಲಿ ಗಂಗಾವಳಿ ಮತ್ತೊಂದು ಬದಿಯಲ್ಲಿ ಅಘನಾಶಿನಿ ನದಿ ಹರಿಯುತ್ತದೆ. ಮಹಾಗಣಪತಿ ದೇವಾಲಯ, ಶಿವ ಮಹಾಬಲೇಶ್ವರ ದೇವಾಲಯಗಳನ್ನು ಹೊಂದಿರುವ ಗೋಕರ್ಣ ಒಂದು ಪವಿತ್ರ ಕ್ಷೇತ್ರವಾಗಿದೆ. ದೇವಾಲಯದ ಸಮೀಪದಲ್ಲಿಯೇ ಸುಂದರವಾದ ಕಡಲತೀರವಿದ್ದು ನೋಡಲು ಮನಮೋಹಕವಾಗಿದೆ

ಗೋ ಎನ್ನುವುದು ಮೊಟ್ಟ ಮೊದಲಿಗೆ ಭೂಮಿಗೆ ಬಂದ ಸಂಜ್ಞೆಯಾಗಿದೆ. ಈ ಕ್ಷೇತ್ರವು ಕರ್ಣವಾಗಿದ್ದು ಶಿವನ ಸಂಯೋಗದಿಂದ ಇಲ್ಲಿ ಗ್ರಹಗಳಿಗೆ ಅಧಿಪನಾದ ಅಂಗಾರಕನು ಹುಟ್ಟುತ್ತಾನೆ. ಭೂಮಿ ಹಾಗೂ ಅಂಗಾರಕ ಕೂಡುವಿಕೆಯಿಂದಾಗಿ ಇದು ಗೋಕರ್ಣ ಎಂದು ಹೆಸರುವಾಸಿಯಾಗಿದೆ. ಎರಡು ನದಿಗಳ ಮಧ್ಯದ ಈ ಭೂಪ್ರದೇಶ ಗೋವಿನ ಕಿವಿಯ ಆಕಾರದಲ್ಲಿ ಇರುವುದರಿಂದ ಇದಕ್ಕೆ ಗೋಕರ್ಣ ಎಂಬ ಹೆಸರು ಬಂದಿದೆ ಎಂದೂ ಸಹ ಹೇಳಲಾಗುತ್ತದೆ.

ಸ್ಕಂದ ಪುರಾಣಾಂತರ್ಗತ ಗೋಕರ್ಣ ಖಂಡ ಹೇಳುವಂತೆ ಗೋಕರ್ಣದಲ್ಲಿ ಅನೇಕ ತೀರ್ಥಗಳು ಅನೇಕ ಲಿಂಗಗಳೂ ಪ್ರಸಿದ್ಧವಾಗಿವೆ. ಅವುಗಳಲ್ಲಿ ೩೩ ಪ್ರದಾನ ಲಿಂಗಗಳು, ೩೩ ತೀರ್ಥಗಳು ಪ್ರಧಾನವಾಗಿವೆ.

ಗೋಕರ್ಣದ ಬೀಚ್‌ಗಳಿಗೆ ವಿದೇಶಿಗರು ಬರುವುದು ಮೋಜು, ಮಸ್ತಿ ಮಾಡಲು, ಮಾದಕ ದ್ರವ್ಯ ಸೇವಿಸಲು ಎಂಬ ಕಲ್ಪನೆ ಬಹುತೇಕರಲ್ಲಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಅವರು ಮಾಡುತ್ತಿರುವ ಕೆಲಸಗಳು ಕುತೂಹಲ ಮೂಡಿಸುತ್ತವೆ. ಇಲ್ಲಿಯ ಜನರೊಂದಿಗೆ ಬೆರೆತು ಸ್ಥಳೀಯ ಉಡುಗೆ ತೊಡುಗೆ ರೂಢಿಸಿಕೊಂಡ ವಿದೇಶಿಗರ ದೊಡ್ಡ ದಂಡೇ ಇಲ್ಲಿದೆ. ರಾಮತೀರ್ಥದ ನೀರಿನಲ್ಲಿ ಸ್ನಾನ ಮಾಡಿ ಯೋಗ, ಧ್ಯಾನ ಮಾಡುವುದನ್ನು ಹೆಚ್ಚಿನ ವಿದೇಶಿಗರು ನಿತ್ಯದ ಕಾಯಕವಾಗಿಸಿಕೊಂಡಿದ್ದಾರೆ.

ಸೂರ್ಯೋದಯವಾದ ಮೇಲೆ ಸಮುದ್ರದಲ್ಲಿ ಸ್ನಾನ ಮಾಡಿ, ಸೂರ್ಯನಿಗೆ ಅರ್ಘ್ಯ ಪ್ರಧಾನ ಮಾಡಿ ಯೋಗ, ಧ್ಯಾನ ಪೂರ್ತಿಗೊಳಿಸಿದ ನಂತರವೇ ತಮ್ಮ ಇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು. ತಾವು ಕಲಿತ ಯೋಗ, ಧ್ಯಾನವನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ಇತರರಿಗೆ ಧಾರೆ ಎರೆಯುತ್ತಿದ್ದಾರೆ. ಗೋಕರ್ಣದ ಧಾರ್ಮಿಕತೆ, ಸಂಸ್ಕೃತಿಯನ್ನು ವಿದೇಶದಲ್ಲೂ ಪಸರಿಸಲು ಪ್ರಯತ್ನಿಸುತ್ತಿದ್ದಾರೆ.

ಮಹಾಬಲೇಶ್ವರ ದೇವಸ್ಥಾನದಲ್ಲಿ ಶಿವನ ಆತ್ಮಲಿಂಗ ಇರುತ್ತದೆ. ಜಾತಿ ಮತಗಳ ಬೇಧವಿಲ್ಲದೆ ಎಲ್ಲರೂ ಗರ್ಭಗುಡಿಯೊಳಕ್ಕೆ ಹೋಗಿ ಆತ್ಮಲಿಂಗವನ್ನು ಮುಟ್ಟಿ ನಮಸ್ಕರಿಸುವ ಅವಕಾಶವಿರುತ್ತದೆ.

ಇಲ್ಲಿ ಇನ್ನೊಂದು ವಿಷೇಶವೆಂದರೆ ಮೃತರ ಅಸ್ಥಿಯನ್ನು ತಂದು ಗೋಕರ್ಣ ಕ್ಷೇತ್ರದಲ್ಲಿ ವಿಸರ್ಜನೆ ಮಾಡುತ್ತಾರೆ. ಇದರಿಂದ ಸತ್ತ ಆತ್ಮಗಳಿಗೆ ಮುಕ್ತಿ ದೊರೆಯುತ್ತದೆ ಎಂಬುದು ಜನರ ಬಲವಾದ ನಂಬಿಕೆ.

ಗೋಕರ್ಣ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ. ಸಂಸ್ಕೃತ ಅಧ್ಯಯನ ಕೇಂದ್ರವೂ ಹೌದು. ಚತುರ್ವೇದ ವಿದ್ವಾಂಸರು ಇಲ್ಲಿದ್ದಾರೆ. ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಸುತ್ತ ಮುತ್ತಲೂ ಮಹಾ ಗಣಪತಿ, ತಾಮ್ರ ಗೌರಿ, ವೀರಭದ್ರೇಶ್ವರ ಇತ್ಯಾದಿ  ದೇವಸ್ಥಾನಗಳಿವೆ. ಇಲ್ಲಿರುವ ಕೋಟಿ ತೀರ್ಥ ಕೆರೆಯ ಮಧ್ಯೆ ಸಪ್ತಕೋಟೇಶ್ವರ ಲಿಂಗವಿದೆ.

ಗೋಕರ್ಣೇಶ್ವರನ ದರ್ಶನ ಪಡೆಯುವ ಸಮಯ ಹೀಗಿವೆ.

ಪ್ರತಿ‌ನಿತ್ಯ ಬೆಳಗಿನ ಆರು ಗಂಟೆಯಿಂದ ದೇವರ ದರ್ಶನಕ್ಕೆ ಅವಕಾಶವಿರುತ್ತದೆ.

ಮಧ್ಯಾಹ್ನ 12.30ರವರೆಗೆ ಭಕ್ತರು ಆತ್ಮ ಲಿಂಗವನ್ನು ಸ್ವರ್ಶಿಸಿ ನಮಸ್ಕರಿಸಲು ಅವಕಾಶವಿದೆ.

ಮಧ್ಯಾಹ್ನ 1.30ರ ನಂತರ ಬಂದವರು ದೇವಸ್ಥಾನ ಗರ್ಭಗುಡಿ ಹೊರಗಿನಿಂದ ದೇವರ ದರ್ಶನ ಮಾಡಬಹುದು.

ಸಂಜೆ 5ರಿಂದ 8 ಗಂಟೆವರೆಗೆ ದರ್ಶನಕ್ಕೆ ಅವಕಾಶವಿದೆ. ರಾತ್ರಿ 9ಕ್ಕೆ ಮಹಾಪೂಜೆ ನಡೆಯುತ್ತದೆ.

ದೇವಸ್ಥಾನದ ವತಿಯಿಂದ ಯಾವುದೇ ವಸತಿ ವ್ಯವಸ್ಥೆ ಇರುವುದಿಲ್ಲ. ಗೋಕರ್ಣದಲ್ಲಿ ಹತ್ತಕ್ಕೂ ಹೆಚ್ಚು ಹೋಟೆಲ್‌ಗಳು ಹಾಗೂ 50ಕ್ಕೂ ಹೆಚ್ಚು ಹೋಮ್ ಸ್ಟೇಗಳಿವೆ. ಅಸ್ಥಿ ಪ್ರದಾನ, ಅಪರ ಕರ್ಮಗಳನ್ನು ಮಾಡಲು ಬರುವವರಿಗೆ ನೆರವಾಗಲು ಸಾಕಷ್ಟು ಮಂದಿ ಸ್ಥಳೀಯ ಪುರೋಹಿತರು ಸಿಗುತ್ತಾರೆ. ಅವರ ಮನೆಯಲ್ಲೇ ಇದ್ದುಕೊಂಡು ಎಲ್ಲ ವಿಧಿ ವಿಧಾನಗಳನ್ನು ಪೂರೈಸಬಹುದು.

 

LEAVE A REPLY

Please enter your comment!
Please enter your name here