ದತ್ತಾತ್ರೇಯ ದೇವಾಲಯದ ಮಹಿಮೆ.

0
1087

ಗುರು ಬ್ರಹ್ಮ ಗುರು ವಿಷ್ಣು
ಗುರು ದೇವೋ ಮಹೇಶ್ವರಂ
ಗುರು ಸಾಕ್ಷಾತ್ ಪರ ಬ್ರಹ್ಮ
ತಸ್ಮೈಶ್ರೀ ಗುರುವೇ ನಮಃ.

ಎಂದು ಸನಾತನ ಧರ್ಮದಲ್ಲಿ ಗುರುವಿಗೆ ಎಲ್ಲದಕ್ಕಿಂತ ಹೆಚ್ಚಿನ ಶ್ರೇಷ್ಠವಾದ ಸ್ಥಾನಮಾನವಿತ್ತು. ಹಾಗಾಗಿಯೇ ಗುರುವನ್ನು ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿಗಳ ಸ್ವರೂಪ ಎಂದು ಬಣ್ಣಿಸಲಾಗಿದೆ. ಅಂತಹ ಗುರುವಿಗೇ ಗುರುವಾಗಿರುವವರು ದತ್ತಾತ್ರೇಯರು.

ಗುರು ದತ್ತಾತ್ರೆಯರು ನೆಲೆಸಿರುವ ಕ್ಷೇತ್ರ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಗಾಣಗಾಪುರದಲ್ಲಿದ್ದು, ಅದನ್ನು ದತ್ತಾತ್ರೇಯ ಕ್ಷೇತ್ರವೆಂದೂ ಸಹ ಕರೆಯಲಾಗುತ್ತದೆ. ಅತ್ರಿ ಮಹರ್ಷಿಗಳು ತ್ರಿಮೂರ್ತಿಗಳ ಕುರಿತು ತಪಸ್ಸು ಮಾಡಿ ತ್ರಿಮೂರ್ತಿಗಳ ಅಂಶವಿರುವ ಮಗ ಹುಟ್ಟಿ ಬರಬೇಕೆಂದು ಪ್ರಾರ್ಥನೆ ಮಾಡಿದ್ದರು. ಅದಕ್ಕಾಗಿ ಅತ್ರಿ ಮಹರ್ಷಿಗಳಿಗೆ ತ್ರಿಮೂರ್ತಿಗಳ ಅಂಶವಿರುವ ದತ್ತಾತ್ರೇಯರು ಮಗನಾಗಿ ಜನಿಸಿದರು.

ಯಾವುದೇ ತತ್ವವನ್ನು ತಿಳಿಯಬೇಕಾದರೆ, ಆ ತತ್ವದ ಮೇಲೆ ಹಿಡಿತ ಸಾಧಿಸಬೇಕಾದರೆ ಗುರುವಿನ ಪಾತ್ರ ಬೇಕು. ಆದ್ದರಿಂದಲೇ ಪ್ರತ್ಯಕ್ಷ ದೈವ ಹಾಗೂ ಎಲ್ಲಕ್ಕೂ ಮಿಗಿಲಾದ ತತ್ವರೂಪನಾದ ಗುರುವನ್ನು ಆಶ್ರಯಿಸಬೇಕು ಎಂಬ ನಂಬಿಕೆ ಇದೆ.

ಗುರುವಿನ ಮಾರ್ಗದರ್ಶನ ಇಲ್ಲದೆ ಯಾವುದೇ ವ್ಯಕ್ತಿ ತನ್ನ ಜೀವನಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಅಂತಹ ಶ್ರೇಷ್ಠ ಗುರುಗಳು ತ್ರಿಮೂರ್ತಿಗಳ ಸ್ವರೂಪರಾದ ದತ್ತಾತ್ರೇಯರು ದತ್ತಾತ್ರೇಯರನ್ನು ಆದಿ ಗುರು ಎಂದೂ ಪೂಜಿಸುತ್ತಾರೆ. ಇನ್ನು ದತ್ತಾತ್ರೇಯರ ತತ್ವ ದತ್ತಾದ್ವೈತ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ. ಎಲ್ಲರನ್ನೂ ಸಮಾನವಾಗಿ ಕಾಣುವ, ಬೇಧ ಬುದ್ಧಿಯನ್ನು ತೋರದ ತತ್ವವೇ ದತ್ತಾತ್ರೇಯರ ಹಾಗೂ ದತ್ತಾದ್ವೈತ ತತ್ವದ ವಿಶೇಷವಾಗಿದೆ. ಉಪನಿಷತ್ ಗಳಲ್ಲಿರುವ ಇದೇ ತತ್ವ ಮುಂದಿನ ದಿನಗಳಲ್ಲಿ ಸಮಾಜ ಸುಧಾರಣೆಗಾಗಿ ಆವಿರ್ಭವಿಸಿದ ಶಂಕರರ ಅದ್ವೈತ ತತ್ವದ ಪ್ರತಿಪಾದನೆಗೂ ಆಧಾರವಾಗಿದೆ.

ದತ್ತಾತ್ರೇಯರ ಅವತಾರವೆನ್ನಲಾದ ನರಸಿಂಹ ಸ್ವರಸ್ವತಿ ಸ್ವಾಮಿಗಳು ಗಾಣಗಾಪುರದಲ್ಲಿ ನೆಲೆಸಿದ್ದರು. ಆದ್ದರಿಂದ ಗಾಣಗಾಪುರವನ್ನು ದತ್ತಾತ್ರೇಯರ ಕ್ಷೇತ್ರವೆನ್ನಲಾಗುತ್ತದೆ. ಗುರು ಚರಿತ್ರೆಯಲ್ಲಿ ನರಸಿಂಹ ಸರಸ್ವತಿಗಳು ತಾವು ಸದಾ ಈ ಕ್ಷೇತ್ರದಲ್ಲಿ ಜಾಗೃತವಾಗಿ ನೆಲೆಸಿರುವುದಾಗಿ ಉಲ್ಲೇಖವಿದೆ.

ಭೀಮಾ ಹಾಗೂ ಅಮರ್ಜಾ ನದಿಗಳ ಸಂಗಮ ಕ್ಷೇತ್ರವಾಗಿರುವ ನಿರ್ಗುಣ ಪಾದುಕೆಗಳ ಪೂಜೆಯನ್ನು ಮಾಡುವುದು ಈ ಕ್ಷೇತ್ರದ ಮತ್ತೊಂದು ವೈಶಿಷ್ಟ್ಯ. ಗುರು ಚರಿತ್ರೆಯಲ್ಲಿ ನರಸಿಂಹ ಸರಸ್ವತಿಗಳು ಹೇಳಿರುವಂತೆ ಇಂದಿಗೂ ದತ್ತಾತ್ರೇಯರ ಸ್ವರೂಪವಾಗಿರುವ ನರಸಿಂಹ ಸರಸ್ವತಿಗಳು ಮುಂಜಾನೆಯ ವೇಳೆಗೆ ಸಂಗಮದಲ್ಲಿ ಮಿಂದು ಮಧ್ಯಾಹ್ನದ ಸಮಯದಲ್ಲಿ ಭೀಕ್ಷಾಟನೆ ಮಾಡಿ ಭಕ್ತರ ಪಾದುಕಾ ಪೂಜೆಯನ್ನು ಸ್ವೀಕರಿಸುತ್ತಾರೆ, ಆದ್ದರಿಂದ ಗಾಣಗಾಪುರದಲ್ಲಿ ಪಾದುಕೆಯ ಪೂಜೆ ನೆರವೇರಿಸಿದರೆ ದತ್ತಾತ್ರೇಯರ ಕೃಪೆ ಉಂಟಾಗಿ ಮನೋಭಿಲಾಶೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.

ಈ ದತ್ತಾತ್ರೇಯ ದೇವಾಲಯಕ್ಕೆ ಒಮ್ಮೆ ಭೇಟಿ ಮಾಡಿ .ದತ್ತಾತ್ರೇಯರ ಪಾದುಕೆಗಳನ್ನು ಮುಟ್ಟಿ ಅವರ ಕೃಪೆ ಪಡೆಯಿರಿ.

LEAVE A REPLY

Please enter your comment!
Please enter your name here