ಶಕ್ತಿಶಾಲಿ ಕದರಮಂಡಲಗಿ ಕಾಂತೇಶ

0
1289

ದೇಶದ ಉದ್ದಗಲದಲ್ಲಿರುವ ಶ್ರೀ ಹನುಮಂತ ದೇವಸ್ಥಾನಗಳಲ್ಲಿ ಮೂರ್ತಿ ಒಂದು ಪಾರ್ಶ್ವಕ್ಕೆ ಮುಖ ಮಾಡಿದ ಭಂಗಿಯಲ್ಲಿ ಇರುವುದು ಸಾಮಾನ್ಯ. ಬ್ಯಾಡಗಿ ತಾಲ್ಲೂಕಿನ ಕದರಮಂಡಲಗಿಯಲ್ಲಿ ನೇರವಾಗಿ ನಿಂತ ಮೂರ್ತಿ ಇರುವುದು ವಿಶೇಷ. ಪ್ರತಿ ಶನಿವಾರ ಹಾಗೂ ಶ್ರಾವಣ ಮಾಸದ ಶನಿವಾರಗಳಂದು ಇಲ್ಲಿ ನಡೆಯುವ ವಿಶೇಷ ಪೂಜೆಗೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಬರುತ್ತಾರೆ.

ಕದರಮಂಡಲಗಿ ರಾಣೆಬೆನ್ನೂರಿನಿಂದ 12 ಕಿ.ಮೀ ದೂರದಲ್ಲಿದೆ. ಕನಕದಾಸರ ಕಾಗಿನೆಲೆಗೆ ಹೋಗುವ ಮಾರ್ಗ ಮಧ್ಯದಲ್ಲಿದೆ. ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಕಾಂತೇಶ ಸ್ವಾಮಿಯ ರಥೋತ್ಸವ ನಡೆಯುತ್ತದೆ. ಮಾರ್ಗಶಿರ ಮಾಸದ ಮೊದಲನೇ ರವಿವಾರ ದೇವಸ್ಥಾನದ ಪಕ್ಕದ ಪುಷ್ಕರಣಿಯಲ್ಲಿ ತೆಪ್ಪೋತ್ಸವ ನಡೆಯುತ್ತದೆ.

ರಥೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಬೆಳಗಿನ 11ರಿಂದ ರಾತ್ರಿ 8ಗಂಟೆಯವರಿಗೆ ಅನ್ನ ಸಂತರ್ಪಣೆ ನಡೆಯುತ್ತದೆ. ಉಳಿದ ದಿನಗಳಲ್ಲಿ ಪ್ರತಿ ದಿನ ಮಧ್ಯಾಹ್ನ 12 ರಿಂದ 3 ಗಂಟೆಯವರಿಗೆ ಭೋಜನ ವ್ಯವಸ್ಥೆ ಇದೆ.

ದೂರದ ಊರುಗಳಿಂದ ಕ್ಷೇತ್ರಕ್ಕೆ ಬರುವ ಭಕ್ತರು ಉಳಿದುಕೊಳ್ಳಲು ದೇವಸ್ಥಾನ ಸಮಿತಿ ಕೊಠಡಿಗಳನ್ನು ನಿರ್ಮಿಸಿದೆ. ಸರಳ ವಿವಾಹಗಳಿಗೆ ಇಲ್ಲಿ ಅವಕಾಶವಿದೆ. ಅದಕ್ಕಾಗಿ ಕಲ್ಯಾಣ ಮಂಟಪವಿದೆ.

ದೇವಸ್ಥಾನದಲ್ಲಿ ನಿತ್ಯ ಬೆಳಗಿನ ಜಾವದಿಂದ ರಾತ್ರಿ 8ರವರೆಗೆ ಅಭಿಷೇಕ ಹಾಗೂ ಪೂಜೆ ಇತ್ಯಾದಿಗಳು ನಡೆಯುತ್ತದೆ. ಇಡೀ ದಿನ ದೇವರ ದರ್ಶನಕ್ಕೆ ಅವಕಾಶವಿದೆ. ಕರ್ನಾಟಕದ ಬಹುತೇಕ ಎಲ್ಲ ಊರುಗಳಲ್ಲೂ ಹನುಮಂತನ ದೇವಸ್ಥಾನಗಳಿವೆ.

ಆದರೆ ಕದರಮಂಡಲಗಿ ಶ್ರೀ ಕಾಂತೇಶ, ಹಿರೇಕೇರೂರು ತಾಲೂಕಿನ ಸಾತೇನಹಳ್ಳಿ ಶಾಂತೇಶ, ಶಿಕಾರಿಪುರದ ಶ್ರೀ ಭ್ರಾಂತೇಶ ಹೆಸರಿನ ಮೂರು ಹನುಮಂತ ದೇವರನ್ನು ಒಂದೇ ದಿನ ದರ್ಶನ ಮಾಡಿದರೆ ಕಷ್ಟ-ಕಾರ್ಪಣ್ಯಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ.

ಕದರಮಂಡಲಗಿ ದೇವಸ್ಥಾನದ ಎದುರಿಗಿರುವ ಶಿಲಾ ಧ್ವಜ ಸ್ತಂಭದಲ್ಲಿರುವ ಕ್ರಿ.ಶ.1503ರ ಶಾಸನದ ಪ್ರಕಾರ ಕದರಮಂಡಲಗಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ. ಕಲ್ಲೇಶ್ವರ, ರಾಮಲಿಂಗೇಶ್ವರ, ನೀಲಕಂಠೇಶ್ವರ, ಮುಕ್ಕಣ್ಣೇಶ್ವರ, ಗವಿಸಿದ್ಧೇಶ್ವರ ಎಂಬ ಪ್ರಾಚೀನ ದೇವಸ್ಥಾನಗಳಿವೆ ಎಂಬ ಮಾಹಿತಿ ಇದೆ.

ಕಾಂತೇಶ ದೇವಸ್ಥಾನದ ಆವರಣದಲ್ಲಿ ಕನಕದಾಸರ ಗುಡಿ, ರಾಘವೇಂದ್ರ ಸ್ವಾಮಿ ಮಠ ಇವೆ. ಇಲ್ಲಿನ ಲಕ್ಷ್ಮಿ ನಾರಾಯಣ ದೇವಸ್ಥಾನಕ್ಕೆ ಕನಕದಾಸರ ಗುಡಿ ಎಂದು ಕರೆಯುತ್ತಾರೆ. ಕನಕದಾಸರು ಹುಟ್ಟಿದ್ದು ಬಾಡ ಗ್ರಾಮದಲ್ಲಿ. ಅವರು ಕಾಗಿನೆಲೆಗೆ ಬಂದು ನೆಲೆಸಿದರು.

ಅವರು ತಿರುಪತಿ ವೆಂಕಟೇಶನ ದರ್ಶನ ಪಡೆಯಲು ಆಗಾಗ ತಿರುಪತಿಗೆ ಹೋಗುತ್ತಿದ್ದರು. ಆಗ ಕದರಮಂಡಲಗಿ ಕಾಂತೇಶನ ದರ್ಶನ ಪಡೆದು ಲಕ್ಷ್ಮಿನಾರಾಯಣನ ಗುಡಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರಂತೆ. ಈ ಕಾರಣದಿಂದ ಇದಕ್ಕೆ ಕನಕದಾಸರ ಗುಡಿ ಎಂಬ ಹೆಸರು ಬಂದಿದೆ. ಶ್ರಿ ಕಾಂತೇಶ ಸ್ವಾಮಿಯನ್ನು ನಿತ್ಯ ಮೂರು ಅವತಾರಗಳಲ್ಲಿ ಅಲಂಕರಿಸಿ ಪೂಜೆ ಸಲ್ಲಿಸುವ ಪದ್ಧತಿ ಇಲ್ಲಿದೆ.

ಹನುಮಾವತಾರ, ಭೀಮಾವತಾರ, ಮಧ್ವಾವತಾರಗಳಲ್ಲಿ ತ್ರಿಕಾಲದಲ್ಲಿ ಪೂಜೆ ಆಗುತ್ತವೆ. ಸೂರ್ಯೋದಯ ಪೂರ್ವದಲ್ಲಿ ಕಾಕಡಾರತಿ ಸೇವೆನಂತರ ಹನುಮಾವತಾರದ ಪೂಜಾ ಅಭಿಷೇಕ, ಬೆಳಗಿನ ನಾಲ್ಕು ತಾಸಿನೊಳಗಾಗಿ ಭೀಮಾವತಾರದ ಮಹಾಪೂಜೆಯು ನಡೆದು ನೈವೇದ್ಯ ಸಮರ್ಪಣೆ ಮಾಡುತ್ತಾರೆ. ರಾತ್ರಿ ಎಂಟು ಗಂಟೆಗೆ ಹರಿನಾಮ ಸಂಕೀರ್ತನೆಯ ಸಂಗೀತ ಸೇವೆಯ ಅವಧಿಯಲ್ಲಿ ಮಧ್ವಾವತಾರದ ಪೂಜೆ ನಡೆಯುತ್ತದೆ.

ಪ್ರತಿ ಶುಕ್ರವಾರ ದೇವರಿಗೆ ತೈಲಾಭ್ಯಂಜನ ಹಾಗೂ ಹೂ-ಪೂಜೆ ನಡೆಯುತ್ತದೆ. ಕಾತೇಶನ ಪೂಜೆಯಲ್ಲಿ ಸೇವಂತಿಗೆ ಹೂವಿಗೆ ಮೊದಲ ಆದ್ಯತೆ.ಕದರಮಂಡಲಗಿ ಸುತ್ತ-ಮುತ್ತಲ ಗ್ರಾಮಗಳು ಸೇವಂತಿಗೆ ಹೂವಿಗೆ ಹೆಸರುವಾಸಿ. ಪ್ರತಿ ಶನಿವಾರ ಸಾಯಂಕಾಲ ಮಂಗಳಾರತಿ ನಂತರ ಸ್ವಾಮಿಯನ್ನು ರಂಗ ಮಂಟಪದ ತೂಗುಮಂಚದಲ್ಲಿ ಕೂಡ್ರಿಸಿ ಪೂಜೆ ಸಲ್ಲಿಸುತ್ತಾರೆ.

ಕ್ಷೇತ್ರದ ದಾರಿ
ರಾಣೆಬೆನ್ನೂರಿನಿಂದ ಪುಣಿ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 3 ಕಿ.ಮೀ ಪ್ರಯಾಣಿಸಿ ಮುಖ್ಯ ರಸ್ತೆಯಿಂದ ಬ್ಯಾಡಗಿ- ಕಾಗಿನೆಲೆ ಒಳ ರಸ್ತೆಯಲ್ಲಿ 9 ಕಿ.ಮೀ. ಹೋದರೆ ಕದರಮಂಡಲಗಿ ಸಿಗುತ್ತದೆ. ಹಾವೇರಿ, ಬ್ಯಾಡಗಿ, ರಾಣೆಬೆನ್ನೂರುಗಳಿಂದ ಕ್ಷೇತ್ರಕ್ಕೆ ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ವಾಹನಗಳ ಸಂಚಾರ ಇದೆ.

LEAVE A REPLY

Please enter your comment!
Please enter your name here