ನಮ್ಮ ಪುಣ್ಯಭೂಮಿ ಭಾರತದ ಒಂದು ಪವಿತ್ರ ಹಾಗೂ ಧಾರ್ಮಿಕ ಸ್ಥಾನವಾಗಿರುವ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಗೆ ಭಾರತೀಯರು ತಮ್ಮ ಜೀವನವನ್ನು ಸಾರ್ಥಕಗೊಳಿಸಲು ಪ್ರತಿಯೊಬ್ಬರೂ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ಸ್ಥಾನ. ಶ್ರೀ ವೀರೇಂದ್ರ ಹೆಗ್ಗಡೆಯವರು ಇಲ್ಲಿನ ಧರ್ಮದರ್ಶಿಗಳು.
ಧರ್ಮಸ್ಥಳ ಮಂಜುನಾಥನಿಗೆ ಕೈ ಮುಗಿದು ಭಕ್ತಿಯಿಂದ ಬೇಡಿಕೊಂಡರೆ ನಮ್ಮ ಎಲ್ಲಾ ಸಮಸ್ಯೆಗಳೂ ದೂರವಾಗುತ್ತದೆ. ಮಾನಸಿಕ ನೆಮ್ಮದಿ ದೊರೆಯುತ್ತದೆ.
ಧರ್ಮಸ್ಥಳ ಮಂಜುನಾಥ ದೇವಾಲಯಕ್ಕೆ ಎಂಟು ಶತಮಾನಗಳ ಇತಿಹಾಸವಿದ್ದು, ನೇತ್ರಾವತಿ ನದಿಯ ದಡದಲ್ಲಿ ನೆಲೆಸಿದೆ. ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿರುವ ಆರಾಧ್ಯ ದೇವ ಮಂಜುನಾಥ ಸ್ವಾಮಿ ವಿಗ್ರಹವನ್ನು ಮಂಗಳೂರಿನ ಕದ್ರಿ ಎಂಬ ಸ್ಥಳದಿಂದ ಉಡುಪಿಯ ಇತಿ ಗಳಾಗಿದ್ದ ಶ್ರೀ ವಾದಿರಾಜರು ಸ್ವತಃ ತಂದು ಪ್ರತಿಷ್ಠಾಪಿಸಿದರು ಎಂದು ಪುರಾಣಗಳು ಹೇಳುತ್ತವೆ.
ಧರ್ಮಸ್ಥಳ ದಾನ ಧರ್ಮಕ್ಕೆ ಪ್ರಸಿದ್ಧವಾಗಿ ಇರುವುದಲ್ಲದೇ ಭಕ್ತರಿಗೆ ನೈತಿಕ ಸಾಂಸ್ಕೃತಿಕ ಕೇಂದ್ರವಾಗಿಯೂ ಆಕರ್ಷಿಸುತ್ತದೆ. ಭಕ್ತರು ನೇತ್ರಾವತಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಬಹಿರಂಗ ಶುದ್ಧಿಯೊಂದಿಗೆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನದೊಂದಿಗೆ ಅಂತರಂಗ ಶುದ್ಧಿಯನ್ನು ಮಾಡಿಕೊಂಡು ಮಾನಸಿಕ ಶಾಂತಿ,ನೆಮ್ಮದಿಯನ್ನು ಹೊಂದುತ್ತಾರೆ. ಮನದ ದುಃಖವನ್ನು ಮರೆಯುತ್ತಾರೆ. ಧರ್ಮಸ್ಥಳವು ರೋಚಕವಾದ ಹಿನ್ನೆಲೆಯನ್ನು ಹೊಂದಿದೆ. ಹಿಂದೆ ಧರ್ಮಸ್ಥಳವನ್ನು “ಕುಡುಮ” ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.
ಈ ಪ್ರಾಂತ್ಯದಲ್ಲಿರುವ ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಭೀಮಣ್ಣ ಪೆರ್ಗಡೆ ಮತ್ತು ಆಮ್ಲ ಬಲ್ಲಾಳ್ತಿ ದಂಪತಿಗಳು ವಾಸಿಸುತ್ತಿದ್ದರು. ಇವರ ಮನೆಗೆ ಬಂದ ನಾಲ್ವರು ಅತಿಥಿಗಳಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ದಂಪತಿಗಳು ನೋಡಿಕೊಳ್ಳುತ್ತಿದ್ದರು. ಅದೇ ದಿನ ರಾತ್ರಿಯಲ್ಲಿ ಆ ನಾಲ್ವರು ಅತಿಥಿಗಳು ದೈವದ ರೂಪದ ಮೂಲಕ ಭೀಮಣ್ಣನವರ ಕನಸಿನಲ್ಲಿ ಬಂದು ತಾವು ಇಲ್ಲಿ ನೆಲೆಸಲು ಇಚ್ಛಿಸಿರುವುದಾಗಿ ತಿಳಿಸಿದರು. ಈ ನಾಲ್ವರು ದೇವತೆಗಳಿಗೆ ಅಣತಿಯಂತೆ ಮನೆಯನ್ನು ಬಿಟ್ಟುಕೊಟ್ಟ ಭೀಮಣ್ಣ ಎಂಬುವರು ದೇವಾಲಯ ನಿರ್ಮಿಸಿ, ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಿರಂತೆ. ಆ ನಾಲ್ಕು ದೇವರೆಂದರೆ ಕಾಲ ರಾಹು ಪುರುಷ ದೈವ.
ದಿನ ಕಳೆದಂತೆ ಅರ್ಚಕರು ಗುಡಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸುವಂತೆ ಭೀಮಣ್ಣ ಅವರಿಗೆ ಸಲಹೆ ಇತ್ತರು. ಇದರಂತೆ ಧರ್ಮ ದೇವತೆಗಳು ಕೂಡ ಕದ್ರಿಯಲ್ಲಿರುವ ಶ್ರೀ ಮಂಜುನಾಥನ ಲಿಂಗವನ್ನು ತಂದು ಪ್ರತಿಷ್ಠಾಪಿಸುವಂತೆ ತಿಳಿಸಿದರೂ ಹಾಗೂ ಈ ಕಾರ್ಯ ಸಂಪನ್ನಗೊಳಿಸಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪ ಸ್ವಾಮಿಯನ್ನು ಕಳುಹಿಸಿದರು. ಅಣ್ಣಪ್ಪ ಸ್ವಾಮಿಯವರು ಕದ್ರಿಗೆ ತೆರಳಿ ಅಲ್ಲಿಂದ ಶಿವಲಿಂಗವನ್ನು ಇಲ್ಲಿಗೆ ತರುವುದರೊಳಗೆ ಧರ್ಮಸ್ಥಳದ ಶ್ರೀ ಮಂಜುನಾಥ ದೇವಾಲಯ ನಿರ್ಮಾಣವಾಗಿತ್ತೆಂದು ಹೇಳಲಾಗುತ್ತದೆ.
ವಿಶೇಷವೆಂದರೆ ಈ ದೇವಸ್ಥಾನವು ಮೊದಲಿನಿಂದಲೂ ಜೈನ ಸಮುದಾಯದವರೊಂದಿಗೆ ನಡೆಸಲ್ಪಡುತ್ತಿದೆ. ಆಡಳಿತ ಮಂಡಳಿಯು ಜೈನ ಸಮುದಾಯವಾಗಿದ್ದರೂ ಸಹ ಇಲ್ಲಿನ ಪೂಜೆ ವಿಧಿ ವಿಧಾನಗಳು ಬ್ರಾಹ್ಮಣ ಸಮುದಾಯದಂತೆ ಬ್ರಾಹ್ಮಣ ಅರ್ಚಕರಿಂದ ನಡೆಯುತ್ತದೆ.
ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಕಾಲ ಕಾಲದಿಂದಲೂ ಹೆಗಡೆ ಮನೆತನದವರು ಇಲ್ಲಿ ಧರ್ಮದರ್ಶಿಗಳಾಗಿ ತಮ್ಮ ಅಮೂಲ್ಯ ಸೇವೆಯನ್ನು ದೇವಾಲಯಕ್ಕೆ ನೀಡುತ್ತಾ ಬಂದಿದ್ದಾರೆ. ಇನ್ನುಳಿದಂತೆ ಧರ್ಮಸ್ಥಳದಲ್ಲಿ ಚಂದ್ರನಾಥ ಬಸದಿ, ಬಾಹುಬಲಿ ಪ್ರತಿಮೆ, ಜಮಾ ಉಗ್ರಾಣ, ವಿಮಾನ ವೀಕ್ಷಣಾ ಸ್ಥಳ, ಅನ್ನಪೂರ್ಣ ಭೋಜನಾಲಯ, ಮಂಜೂಷಾ ಸಂಗ್ರಹಾಲಯ, ಲಲಿತೋದ್ಯಾನ ಹೀಗೆ ಹಲವು ಆಕರ್ಷಣೆಗಳಿಗೆ ಭೇಟಿ ನೀಡಬಹುದಾಗಿದೆ.
ಲಕ್ಷ ದೀಪೋತ್ಸವ : ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವಕ್ಕೆ ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಮೀರಿ ಭಕ್ತಾದಿಗಳು ಬರುತ್ತಾರೆ. ಜ್ಞಾನದ ಬೆಳಕನ್ನು ನೀಡುವುದರೊಂದಿಗೆ ಲಕ್ಷದೀಪೋತ್ಸವದ ಜನುಮದ ಅಂತರಂಗ ಹಾಗೂ ಬಹಿರಂಗ ಅಂಧಕಾರವನ್ನು ತೊಲಗಿಸಲು ಯಶಸ್ವಿಯಾಗಿದೆ.
ಅನ್ನದಾಸೋಹ : ಧರ್ಮಸ್ಥಳಕ್ಕೆ ಆಗಮಿಸಿದ ಯಾವುದೇ ಯಾಂತ್ರಿಕ ಅಹಾರ ದೊರಕದೆ ಹಸಿದು ಮರಳಿ ಹೋಗಬಾರದು ಎಂಬುದು ಇಲ್ಲಿ ಅನುಚಾನವಾಗಿ ನಡೆದು ಬಂದ ಸಂಪ್ರದಾಯ.ಅನ್ನದಾನಕ್ಕಿಂತ ಇನ್ನು ದಾನವೂ ಇಲ್ಲ ಎಂಬಂತಿದೆ ಇಲ್ಲಿನ ಅಚ್ಚುಕಟ್ಟಾದ ವ್ಯವಸ್ಥೆ. ಧರ್ಮಸ್ಥಳದಲ್ಲಿ ಅನ್ನದಾಸೋಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಸುಸೂತ್ರವಾಗಿ ಸಹಸ್ರಾರು ಮಂದಿಗೆ ಏಕಕಾಲದಲ್ಲಿ ದಾಸೋಹ ಕಲ್ಪಿಸಲಾಗುತ್ತದೆ.