ಶ್ರೀ ರಾಮನ ಭಕ್ತ ಹನುಮಂತನ ಸಾಹಸದ ಬಗ್ಗೆ ಗೊತ್ತಾ? ತಿಳಿದುಕೊಳ್ಳಿ.

0
1380

ರಾಮಾಯಣದ ಪಾತ್ರಗಳಲ್ಲಿ ಜನರ ಮನಸ್ಸಿನ ಮೇಲೆ ರಾಮನಷ್ಟೇ ಪರಿಣಾಮವನ್ನು ಬೀರಿದ ಇನ್ನೊಂದು ಪಾತ್ರವೆಂದರೆ ಆಂಜನೇಯ. ಜಾತಿ-ಮತ-ಪಂಥಗಳನ್ನು ಮೀರಿ ಜನ ಆಂಜನೇಯನನ್ನು ಆರಾಧಿಸುತ್ತಾರೆ. ಆಂಜನೇಯನ ಮಹಿಮೆಯೇ ಮುಖ್ಯವಾಗಿರುವ ಕಾಂಡಕ್ಕೆ ರಾಮಾಯಣದಲ್ಲಿ ‘ಸುಂದರಕಾಂಡ’ವೆಂದು ಕರೆದಿದ್ದಾರೆ.

ನಮ್ಮ ಹಿಂದೂ ಧರ್ಮಗ್ರಂಥಗಳಲ್ಲಿ ಒಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲಿ ಒಬ್ಬನಾದ ಹಾಗೂ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ, ಅಂಜನಾದೇವಿಯ ಮಗ, ರಾಮನ ಪರಮಭಕ್ತ, ಹಾಗೂ ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.

ಆಂಜನೇಯನು ಅಂಜನಾದೇವಿಯ ಪುತ್ರನು. ವಾಯುದೇವನಿಂದ ಹುಟ್ಟಿದವನು. ಆತನು ಹುಟ್ಟುತ್ತಿದ್ದ ಹಾಗೆಯೇ ಸೂರ್ಯನನ್ನು ನೋಡಿ ಹಣ್ಣೆಂದು ಭ್ರಮಿಸಿ ಹಿಡಿಯುವುದಕ್ಕೆಂದು ಹಾರಿದನು. ಇವನನ್ನು ನಿಗ್ರಹಿಸಬೇಕೆಂದು ಇಂದ್ರನು ವಜ್ರಾಯುಧವನ್ನು ಪ್ರಯೋಗಿಸಿದ. ಅದರಿಂದ ಹನುಮಂತ ಮೂರ್ಛೆಹೋದ. ಇದಕ್ಕೆ ಕೋಪಗೊಂಡ ವಾಯು ಚಲಿಸದೆ ನಿಂತ. ಆಗ ಲೋಕದ ಚರಾಚರ ಪ್ರಾಣಿಗಳು ಮರಣ ಬಂದಂತಾಗಿ ತತ್ತರಿಸಿದವು. ಆಗ ಬ್ರಹ್ಮನು ವಾಯುವನ್ನು ಸಮಾಧಾನಪಡಿಸಿದ. ಆ ಸಮಯದಲ್ಲಿ ದೇವಾನುದೇವತೆಗಳು ಆಂಜನೇಯನಿಗೆ ವರದಾನ ಮಾಡಿದರು. ಯೋಗಶಾಸ್ತ್ರದ ಪರಮ ರಹಸ್ಯವೆಲ್ಲವನ್ನೂ ಅರಿತನು. ಅವನ ಸಾಮರ್ಥ್ಯ ಕೇವಲ ದೇಹದ್ದು ಮಾತ್ರವಲ್ಲ; ಬುದ್ಧಿಯದು, ಮನಸ್ಸಿನದು ಕೂಡ.

ಸೀತಾನ್ವೇಷಣೆ’ ಆಂಜನೇಯನ ಬಹುಮುಖ್ಯ ಸಾಹಸಗಳಲ್ಲೊಂದು. ಸುಗ್ರೀವನ ಸೈನ್ಯದಲ್ಲಿದ್ದ ಉಳಿದೆಲ್ಲ ವೀರರ ಶಕ್ತಿ ಒಂದು ತೂಕವಾದರೆ ಆಂಜನೇಯನೊಬ್ಬನದೇ ಒಂದು ತೂಕ. ಕುವೆಂಪು ರಾಮಾಯಣ ದರ್ಶನದಲ್ಲಿ ಈ ಭಾಗ ಬಹಳ ಸುಂದರವಾಗಿ ಬರುತ್ತದೆ. ಹನುಮಂತನ ಯೋಗಶಕ್ತಿಯನ್ನು ಗುರುತಿಸುವ ಮತ್ತೊಂದು ಸಂದರ್ಭ ನಿಕುಂಭಿಲಾ ಯಾಗ. ರಾವಣ ಮಗ ಇಂದ್ರಜಿತು ಈ ಯಾಗದಲ್ಲಿ ಶಕ್ತಿ ಸಂಪಾದಿಸಲು ತೊಡಗಿದ್ದ. ಅದನ್ನು ಕೆಡಿಸಲು ಲಕ್ಷ್ಮಣ ಬರುತ್ತಾನೆ. ಎಲ್ಲೆಲ್ಲೂ ಅಗ್ನಿಯೇ ಇರುತ್ತದೆ. ಅದನ್ನು ದಾಟುವಾಗ ಲಕ್ಷ್ಮಣ ಸೀದ ಶವದಂತಾಗುತ್ತಾನೆ. ಅವನನ್ನು ಬದುಕಿಸಲು ಇದ್ದುದು ಒಂದೇ ದಾರಿ. ಓಷಧೀ ಪರ್ವತದಲ್ಲಿದ್ದ ಸಂಜೀವಿನೀ ಬಳ್ಳಿ ತರುವುದು. ಅದನ್ನು ತರಲು ಆಂಜನೇಯ ಯೋಗಶಕ್ತಿಯನ್ನು ಬಳಸಬೇಕಾಯಿತು. ಸಾಮಾನ್ಯ ಮಾರ್ಗದಲ್ಲಿ ಸಂಚರಿಸಿದರೆ ಪರ್ವತಕ್ಕೆ ಹೋಗಿ ಬರಲು ಒಂದು ದಿನ ಬೇಕು. ಆಂಜನೇಯ ತನ್ನ ಯೋಗಶಕ್ತಿಯಿಂದ ಪರ್ವತಕ್ಕೆ ತೆರಳಿ ಸಂಜೀವಿನಿ ತಂದು ಲಕ್ಷ್ಮಣನಿಗೆ ಬಂದ ವಿಪತ್ತು ಪರಿಹಾರವಾಗಲು ಸಹಾಯ ಮಾಡುತ್ತಾನೆ.

ಹನುಮಂತ ಅಷ್ಟು ಪರಾಕ್ರಮಿಯಾದರೂ ನಿಸ್ವಾರ್ಥಿ. ರಾಮನಾಮ ಬಿಟ್ಟು ಬೇರೇನೂ ಅವನಿಗೆ ಗೊತ್ತಿಲ್ಲ. ಏನೇ ಮಾಡಿದರೂ ರಾಮನಿಗೆ ಪ್ರೀತಿಯಾಗುವ ಕೆಲಸವನ್ನೇ ಮಾಡುತ್ತಾನೆ. ಅನುಕ್ಷಣವೂ ರಾಮನಾಮವೇ ಅವನ ಮಂತ್ರ. ತನಗೆ ತೊಂದರೆಯಾಗುವುದನ್ನೂ ಲೆಕ್ಕಿಸದೆ ರಾಮನಿಗಾಗಿ ಏನು ಬೇಕಾದರೂ ಮಾಡಬಲ್ಲಂಥವನು ಹನುಮಂತ ಒಬ್ಬನೇ.

ರಾವಣ ಸಂಹಾರವಾಗಿ ಸೀತಾರಾಮಲಕ್ಷ್ಮಣರು ಅಯೋಧ್ಯೆಗೆ ತೆರಳಿದಾಗ ಹನುಮಂತನೂ ಅವರ ಜೊತೆಗೆ ಹೋಗುತ್ತಾನೆ. ರಾಮನ ಪಟ್ಟಾಭಿಷೇಕದ ಸಂದರ್ಭದಲ್ಲಿ ಶ್ರೀರಾಮನು ಹನುಮಂತನ ನಿಸ್ವಾರ್ಥ ಸೇವೆಗೆ ಮೆಚ್ಚಿ ಚಿರಂಜೀವಿಯಾಗೆಂದು ಅನುಗ್ರಹಿಸುತ್ತಾನೆ.

ಆಂಜನೇಯನ ವ್ಯಕ್ತಿತ್ವ ಅದೆಷ್ಟು ಎತ್ತರದಲ್ಲಿದೆ ಎಂಬುದನ್ನು-ಅರಿಯಲು ಆಂಜನೇಯ ಸೀತೆಯ ಬಗ್ಗೆ ತೋರಿದ ಮಾತೃಪ್ರೇಮವೇ ಉದಹರಣೆಯಾಗಿದೆ.
ಆಂಜನೇಯನನ್ನು ಆಕಾಶದೆತ್ತರಕ್ಕೆ ಬೆಳೆದ ವ್ಯಕ್ತಿತ್ವ, ಲೋಕದ ಶೋಕವನ್ನು ನಾಶಮಾಡಿದವನು, ಲೋಕದಲ್ಲಿ ಶುದ್ಧವಾದ ಜೀವನ ಎಂದರೆ ಹೀಗಿರಬೇಕು ಎನ್ನುವುದಕ್ಕೆ ಅವನ ನಿದರ್ಶನ, ಇಂಥ ಗುಣಗಳಿರುವುದರಿಂದಲೇ ನಮ್ಮ ಸಮಾಜ ಅವನನ್ನು ಪೂಜಿಸಿ ಕೊಂಡಾಡುತ್ತಿದೆ.

LEAVE A REPLY

Please enter your comment!
Please enter your name here