ಆದಿಚುಂಚನಗಿರಿಯಲ್ಲಿ ಶ್ರೀ ಕಾಲಭೈರವನ ಭವ್ಯ ದೇವಾಲಯ. ತಪ್ಪದೇ ನೋಡಿ ಬನ್ನಿ

0
1375

ಆದಿಚುಂಚನಗಿರಿ ಕ್ಷೇತ್ರವು ದಕ್ಷಿಣ ಕ್ಷೇತ್ರದ ೭೧ನೇ ಪೀಠಾಧಿಪತಿ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ನೇತೃತ್ವದಲ್ಲಿ ಅಭಿವೃದ್ಧಿಗೊಂಡಿತು. ಆದಿಚುಂಚನಗಿರಿಯ ಶ್ರೀ ಕಾಲಭೈರವೇಶ್ವರ ಮಂದಿರವು ದಕ್ಷಿಣ ಭಾರತದಲ್ಲೇ  ಈ ದೇವರಿಗೆ ಸಂಬಂಧಿಸಿದಂತೆ ಅತ್ಯಂತ ದೊಡ್ಡ ಹಾಗೂ ಪ್ರಸಿದ್ಧ ಯಾತ್ರಾಸ್ಥಳವಾಗಿ ಮಾರ್ಪಟ್ಟಿದೆ.

ಸಾಧಾರಣವಾಗಿ ಕಾಲಭೈರವನೆಂದರೆ ಕಾಶಿಯ ನೆನಪಾಗುತ್ತದೆ, ಉಜ್ಜಯಿನಿಯ ಕಾಲಭೈರವನೂ ಪ್ರಸಿದ್ಧನೇ ಸರಿ. ದಕ್ಷಿಣದಲ್ಲಿ ಈ ದೇವತೆಯ ದೇಗುಲಕ್ಕೆ ಇದ್ದ ಕೊರತೆಯು ಆದಿಚುಂಚನಗಿರಿಯ ಮಂದಿರದ ಮೂಲಕ ತುಂಬಿದಂತಾಗಿದೆ. ಆದಿಚುಂಚನಗಿರಿ ಕ್ಷೇತ್ರವು ಇತ್ತೀಚೆಗೆ ಪ್ರಸಿದ್ಧಿಗೆ ಬಂದಿದ್ದರೂ, ಅದು ಪುರಾತನ ಭೈರವ ಕ್ಷೇತ್ರ.

ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು ೧೧೦ ಕಿ.ಮೀ.ಗಳ ದೂರದಲ್ಲಿ ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿಗೆ ಸೇರಿದ ಬೆಳ್ಳೂರು ಸಮೀಪ ಈ ದೇವಾಲಯವಿದೆ. ಪ್ರಕೃತಿಯ ಸಿರಿಮಡಿಲಲ್ಲಿರುವ, ಬೃಹತ್ ಬಂಡೆಗಳ ಹಿನ್ನೆಲೆಯಲ್ಲಿ ಮೂಡಿರುವ ಈ ಮಂದಿರವು ಆಧುನಿಕ ಮತ್ತು ಪುರಾತನ ಶೈಲಿಗಳೆರಡನ್ನೂ ಸಮವಾಗಿ ಬಳಸಿಕೊಂಡಿದೆ.

ಆದಿಚುಂಚನಗಿರಿಯ ಈ ದೇವಾಲಯವನ್ನು ತಲುಪಲು ಬೆಟ್ಟದ ಪಶ್ಚಿಮ ದಿಕ್ಕಿನಲ್ಲಿರುವ ಮೆಟ್ಟಿಲುಗಳ ಮೂಲಕ ಸಾಗಬೇಕು. ಬೆಟ್ಟದ ತಪ್ಪಲಿನಲ್ಲಿ ಬೃಹತ್ ಪುಷ್ಕರಣಿಯನ್ನು ರಚಿಸಲಾಗಿದೆ. ಬೆಟ್ಟದ ಮೇಲೆ ಏರುವಾಗ ಅನೇಕ ಮಹಾದ್ವಾರಗಳು ಕಾಣಸಿಗುತ್ತವೆ. ಇವುಗಳ ಇಕ್ಕೆಲಗಳಲ್ಲಿ ಆಶ್ರಮದ ಕಟ್ಟಡಗಳಿವೆ. ಮಧ್ಯದಲ್ಲಿ ಭದ್ರವಾದ, ವಿಸ್ತಾರವಾದ ಬುನಾದಿಯ ಮೇಲೆ ಪೂರ್ವಾಭಿಮುಖವಾಗಿ ನಿಂತಿರುವ ಭವ್ಯ ದೇವಾಲಯವಿದೆ.

ಕಾಲ ಭೈರವನು ರುದ್ರ-ಶಿವ-ಈಶಾನ ಸ್ವರೂಪನಾದ್ದರಿಂದ ಈತನು ದೇವಮೂಲೆಯೆಂದು ಕರೆಯುವ ಈಶಾನ್ಯದ ಅಧಿಪತಿ. ಸಾಧಾರಣವಾಗಿ ಅಷ್ಟಭೈರವರ ಉಲ್ಲೇಖ ಎಲ್ಲೆಡೆಯೂ ಪ್ರಚಲಿತವಿದೆ. ಆದರೆ ಇಲ್ಲಿ ೮೮ ಭೈರವರ ವಿವಿಧ ರೂಪಗಳನ್ನು ಕಂಡರಿಸಲಾಗಿದ್ದು, ಅವುಗಳನ್ನು ಶುಭ್ರ ಬಿಳಿಯ ಕಂಬಗಳ ಹಿನ್ನೆಲೆಯಲ್ಲಿ ಅಳವಡಿಸಲಾಗಿದೆ. ಅಷ್ಟಭೈರವರೆಂದರೆ ಅಷ್ಟದಿಕ್ಪಾಲಕರು. ಆದರೆ ಕೆಲವು ಶಿವಮಂದಿರಗಳಲ್ಲಿ ಈಶಾನ್ಯದಲ್ಲಿ ಕ್ಷೇತ್ರಪಾಲನನ್ನು ಸ್ಥಾಪಿಸಿರುವುದು ಸಾಧಾರಣವಾಗಿ ಕಂಡುಬರುತ್ತದೆ.

ಆದಿಚುಂಚನಗಿರಿಯಲ್ಲಿನ ಕಾಲಭೈರವನ ವಿಗ್ರಹಕ್ಕೆ ನಾಲ್ಕು ಕೈಗಳಿದ್ದು, ಮೇಲಿನ ಬಲಗೈಯಲ್ಲಿ ತ್ರಿಶೂಲ, ಕೆಳ ಬಲಗೈನಲ್ಲಿ ಖಡ್ಗಗಳಿವೆ. ಕೆಳ ಎಡಗೈನಲ್ಲಿ ಕಪಾಲ ಮತ್ತು ಬ್ರಹ್ಮನ ಶಿರಗಳಿವೆ. ಈ ಶಿರದ ಕೆಳಗೆ ಕಾಲಭೈರವನ ವಾಹನ ನಾಯಿಯಿದ್ದು ಇದು ಬ್ರಹ್ಮನ ಶಿರದಿಂದ ತೊಟ್ಟಿಕ್ಕುತ್ತಿರುವ ರಕ್ತವನ್ನು ಹೀರುತ್ತಿದೆ. ಅದರ ಹಿಂಗಾಲುಗಳು ಕತ್ತರಿಸಲ್ಪಟ್ಟ ಇನ್ನೊಂದು ಶಿರದ ಮೇಲೆ ಊರಿ ನಿಂತಿವೆ. ಕಾಲಭೈರವನ ವಿಗ್ರಹವನ್ನು ಗುರುತಿಸುವಾಗ ಬ್ರಹ್ಮಶಿರ ಮತ್ತು ಕಪಾಲಗಳು ಮುಖ್ಯವಾಗುತ್ತವೆ. ಏಕೆಂದರೆ ಡಮರು ಮತ್ತು ತ್ರಿಶೂಲಗಳು ಸಾಧಾರಣವಾಗಿ ಎಲ್ಲ ಶಿವ ಶಿಲ್ಪಗಳಲ್ಲಿ ಕಂಡಬರುತ್ತವೆ. ಆದಿ ಚುಂಚನಗಿರಿಯಲ್ಲಿರುವ ಕಾಲಭೈರವನ ವಿಗ್ರಹದಲ್ಲಿನ ವಿಶೇಷವೆಂದರೆ ಆತನು ಸೊಂಟದಲ್ಲಿ ಕಿರುಗತ್ತಿಯನ್ನು ಧರಿಸಿದ್ದಾನೆ. ಅವನ ಜಟೆಯ ಕೂದಲುಗಳು ಹಿಂದಕ್ಕೆ ಬಾಚಿದಂತಿದ್ದು, ಅವು ಕುತ್ತಿಗೆಯ ಹಿಂಭಾಗದಲ್ಲಿ ಹರಡಿಕೊಂಡಿದೆ. ಉಬ್ಬಿದ ಕಣ್ಣುಗಳು, ಕೋರೆದಾಡೆಗಳು, ದೊಡ್ಡ ಕುಂಡಲಗಳು, ದೀರ್ಘವಾದ ಸರ್ಪಮಾಲೆ, ಅಗಲವಾದ ಮುತ್ತಿನ ಮಣಿಗಳ ಹಾರ, ಎತ್ತರವಾದ ಪಾದುಕೆಗಳು ಸುಂದರವಾಗಿ ಮೂಡಿಬಂದಿವೆ. ಗರ್ಭಗೃಹದ ಬದಿಯಲ್ಲಿ ೧೦ ಅಡಿ ಎತ್ತರದ ಭವ್ಯವಾದ ಕಪ್ಪುಕಲ್ಲಿನ ಭದ್ರಕಾಳಿಯ ವಿಗ್ರಹವಿದೆ. ಜನಸಂದಣಿಯಿಂದ ಕಾಪಾಡಲು, ಗಾಜಿನ ಕಪಾಟುಗಳಲ್ಲಿ ಇಡಲಾಗಿದೆ. ಶೈವ ತಂತ್ರಾಗಮದ ಅಧಿದೇವತೆಯೇ ಭೈರವ. ಆತನ ವಿಗ್ರಹಗಳು ಉತ್ತರದ ವಾರಾಣಸಿಯಲ್ಲಿ, ಉಜ್ಜಯನಿಯಲ್ಲಿ  ಯೋಗಿನಿಯರ ಮಂದಿರಗಳಲ್ಲಿ, ವಿಶೇಷತಃ ಶಿವನ ಪ್ರಥಮ ಪತ್ನಿಯಾದ ಸತಿಯ ಶರೀರದ ಭಾಗಗಳು ಬಿದ್ದ ಎಡೆಗಳಾದ ಶಕ್ತಿಪೀಠಗಳಲ್ಲಿ, ಹೀಗೆ ವಿವಿಧೆಡೆಗಳಲ್ಲಿ ಕಂಡುಬರುತ್ತವೆ. ಆದರೆ ದಕ್ಷಿಣ ಭಾರತದಲ್ಲಿ ಆದಿಚುಂಚನಗಿರಿಯ ದೇವಾಲಯವನ್ನು ಮೀರಿಸಿದ ಬೇರೆ ಮಂದಿರ ಕಾಣಲಾರದು.

LEAVE A REPLY

Please enter your comment!
Please enter your name here