ಈ ಲಕ್ಷಣಗಳು ಕಂಡಲ್ಲಿ ಅದು ಖಂಡಿತ ಹೃದಯಾಘಾತ

0
1683

ವಿಶ್ವದಲ್ಲಿ ಸಂಭವಿಸುತ್ತಿರುವ ಒಟ್ಟು ಮರಣ ಪ್ರಮಾಣದಲ್ಲಿ ಶೇ 30ರಷ್ಟು ಸಾವುಗಳು ಹೃದಯಾಘಾತದಿಂದ ಸಂಭವಿಸುತ್ತಿವೆ. ಹೃದಯದ ಸಮಸ್ಯೆ ಎಂಬುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯ. ಇದು ಯಾವ ವಯಸ್ಸಿನವರನ್ನು ಕಾಡುತ್ತದೆ ಎಂದು ಊಹಿಸಲು ಕೂಡ ಅಸಾಧ್ಯವಾಗಿದೆ.

ಈ ಹೃದಯಾಘಾತವು ಹೆಚ್ಚಾಗಿ ರಾತ್ರಿಯ ಸಮಯದಲ್ಲಿ ಬರುತ್ತದೆ. ಈ ಹೃದಯಾಘಾತಕ್ಕೆ ಕಾರಣ ಹೃದಯದ ಒಂದು ಭಾಗಕ್ಕೆ ರಕ್ತ ಪೂರೈಕೆಯಲ್ಲಿ ಅಡ್ಡಿಯುಂಟಾಗಿ ಅಲ್ಲಿನ ಹೃದಯದ ಜೀವಕೋಶಗಳು ಸಾಯುವುದು. ಹೃದಯಕ್ಕೆ ಆಮ್ಲಜನಕಯುಕ್ತ ರಕ್ತದ ಪೂರೈಕೆಯ ಕೊರತೆಯಾದಾಗ ಹೃದಯದ ಸ್ನಾಯುಗಳು ನಿಲ್ಲಲು ಆರಂಭಿಸುತ್ತವೆ ಮತ್ತು ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.

ಪರಿಧಮನಿಯ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅಥವಾ ಕೊಲೆಸ್ಟ್ರಾಲ್ ಸಂಗ್ರಹದಿಂದಾಗಿ ಹೃದಯಕ್ಕೆ ಆಮ್ಲಜನಕಯುಕ್ತ ರಕ್ತದ ಕೊರತೆಯುಂಟಾಗುತ್ತದೆ. ಪ್ರಥಮ ಬಾರಿ ಹೃದಯಾಘಾತಕ್ಕೆ ಗುರಿಯಾಗುವವರಲ್ಲಿ ಶೇ.90 ರಷ್ಟು ಜನರು ಬದುಕುಳಿಯು ತ್ತಾರೆ. ಆದರೆ ಶೇ.10ರಷ್ಟು ಜನರು ಆಸ್ಪತ್ರೆ ತಲುಪುವುಷ್ಟರಲ್ಲಿ ಸ್ಥಿತಿ ತೀರ ಹದಗೆಟ್ಟು ಸಾವನ್ನಪ್ಪುತ್ತಾರೆ.

ಹೀಗಾಗಿ ನಾವು ಮೊದಲೇ ಹೃದಯಾಘಾತದ ಲಕ್ಷಣಗಳನ್ನು ತಿಳಿದುಕೊಂಡರೆ ಈ ಸಮಸ್ಯೆಯಿಂದ ದೂರವಾಗಬಹುದು. ತೀವ್ರವಾದ ಎದೆನೋವು ಹೃದಯಾಘಾತಕ್ಕೆ ಸಂಬಂಧಿಸಿದ ನೋವು ಇದು ಏಕಾಏಕಿಯಾಗಿ ಎದೆಯ ಮಧ್ಯಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ನೋವು ಅತ್ಯಂತ ತೀವ್ರವಾಗಿರುತ್ತದೆ. ಯಾರೋ ನಮ್ಮ ಹೃದಯದಿಂದ ಜೀವವನ್ನು ಹಿಂಡಿ ಹೊರಕ್ಕೆ ತೆಗೆಯುತ್ತಿದ್ದಂತಿರುತ್ತದೆ.

ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಎಂಜಿನಾ’ ಎಂದು ಕರೆಯುತ್ತಾರೆ. ಈ ನೋವು ಕೆಲವು ನಿಮಿಷಗಳ ಕಾಲ ಇರುತ್ತದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಹೃದಯಕ್ಕೆ ರಕ್ತದ ಪೂರೈಕೆ ಪುನರಾರಂಭ ಗೊಂಡರೆ ಕೆಲ ಹೊತ್ತಿನ ಬಳಿಕ ಮಾಯವಾಗುತ್ತದೆ. ಆದರೆ ಹೀಗಾಗದಿದ್ದರೆ ಈ ನೋವು ತ್ವರಿತವಾಗಿ ತೋಳುಗಳು, ಬೆನ್ನು, ಕುತ್ತಿಗೆ ಮತ್ತು ಬಳಿಕ ತಲೆಗೆ ಹರಡುತ್ತದೆ.

ದವಡೆಗಳಲ್ಲಿ ನೋವು ಅಥವಾ ಹಲ್ಲುಗಳಲ್ಲಿ ನೋವು ಕಂಡು ಬರುತ್ತದೆ. ಈ ಲಕ್ಷಣವು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಹೃದಯಾಘಾತದ ಸಂದರ್ಭ ದಲ್ಲಿ ಕಾಣಿಸಿಕೊಳ್ಳುತ್ತದೆ. ಇದರೊಂದಿಗೆ ಎದೆನೋವು ಉಂಟಾಗಬಹುದು ಅಥವಾ ಉಂಟಾಗದಿರಬಹುದು.

ಇದು ಹೃದಯಾಘಾತದ ಇನ್ನೊಂದು ಸಾಮಾನ್ಯ ಲಕ್ಷಣವೆಂದರೆ ತೀವ್ರ ಉಸಿರಾಟದ ಸಮಸ್ಯೆ. ಇದು ವ್ಯಕ್ತಿಯಲ್ಲಿ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನೀರಿನಲ್ಲಿ ಮುಳುಗುತ್ತಿರುವ ವ್ಯಕ್ತಿಯಂತೆ ಆತ ಉಸಿರಿಗಾಗಿ ಪರದಾಡುತ್ತಾನೆ. ಈ ಲಕ್ಷಣವು ಎದೆನೋವು ಆರಂಭವಾಗುವ ಮೊದಲು ಅಥವಾ ಆರಂಭವಾಗುತ್ತಿದ್ದಂತೆ ಕಾಣಿಸಿಕೊಳ್ಳುತ್ತದೆ.

ವ್ಯಕ್ತಿಯೋರ್ವ ದಿಢೀರ್‌ನೆ ಕುಸಿದು ಬಿದ್ದಾಗ ಹೆಚ್ಚಿನ ಸಂದರ್ಭಗಳಲ್ಲಿ ಆತ ಅತಿಯಾಗಿ ಬೆವರಿರುವುದನ್ನು ನಾವು ನೋಡುತ್ತೇವೆ. ಆದರೆ ಇದರ ಲಕ್ಷಣಗಳ ಜೊತೆಗೆ ವ್ಯಕ್ತಿ ಅತಿಯಾಗಿ ಬೆವರಿದ್ದರೆ ಅದು ಹೃದಯಾಘಾತದ ಸ್ಪಷ್ಟ ಸಂಕೇತವಾಗಿದೆ.

ಹೆಚ್ಚಿನ ಸಂದರ್ಭಗಳಲ್ಲಿ ಎಂಜಿನಾ ಹೊಟ್ಟೆಯ ಮೇಲ್ಭಾಗಕ್ಕೆ ಹರಡುತ್ತದೆ ಮತ್ತು ಇದು ತೀವ್ರ ಎದೆಯುರಿ, ಅಜೀರ್ಣದ ಅನುಭವ, ವಾಕರಿಕೆ ಮತ್ತು ವಾಂತಿಗೆ ಕಾರಣವಾಗುತ್ತದೆ.

ಹೃದಯಾಘಾತವಾದಾಗ ಜನರು ತಮ್ಮ ಎಡತೋಳು, ಭುಜಗಳು, ಬೆನ್ನು ಮತ್ತು ಕೆಲವೊಮ್ಮೆ ಶರೀರದ ಸಂಪೂರ್ಣ ಎಡಭಾಗದಲ್ಲಿಯೂ ಸಹ ನೋವು ಅನುಭವಿಸುತ್ತಾರೆ. ಆದರೆ ಈ ನೋವು ಯಾವಾಗಲೂ ಎಡಭಾಗಕ್ಕೇ ಸೀಮಿತವಾಗಿರುವುದಿಲ್ಲ, ಅದು ಶರೀರದ ಬಲಭಾಗದಲ್ಲಿಯೂ ಕಾಣಿಸಿಕೊಳ್ಳುತ್ತದೆ.

ಈ ಲಕ್ಷಣಗಳು ಕಂಡುಬಂದಾಗ ತಮ್ಮ ಸಹಾಯಕ್ಕೆ ನಿಮ್ಮ ಸುತ್ತಲಿನ ಜನರಿಗೆ ತಿಳಿಸಿ, ಆ್ಯಂಬುಲನ್ಸ್ ತರಿಸುವಂತೆ ಸೂಚಿಸುವುದು ಬಹಳ ಮುಖ್ಯವಾಗಿದೆ.ಹಾಗೂ ಆ ಸಂದರ್ಭದಲ್ಲಿ ನೀವು ಹೆಚ್ಚು ಭಯ ಪಡಬಾರದು. ನಿಮ್ಮಲ್ಲಿ ಆತ್ಮ ವಿಶ್ವಾಸ ಇರಬೇಕು. ಹಾಗೂ ವೈದ್ಯರ ಸಹಾಯ ತುಂಬಾ ಮುಖ್ಯ .

LEAVE A REPLY

Please enter your comment!
Please enter your name here