ಲೋಕಮಾತೆ ವಾಸವಿಯ ಜಯಂತಿ ಇಂದು ತಾಯಿಯ ಮಹಿಮೆ ತಿಳಿಯಿರಿ

0
871

ವೈಶಾಖ ಶುದ್ಧ ದಶಮಿ ಲೋಕಮಾತೆ ವಾಸವಿಯ ಜಯಂತಿ. ಹತ್ತನೆಯ ಶತಮಾನದಲ್ಲಿ ವೆಂಗಿದೇಶವನ್ನು ಆಳುತ್ತಿದ್ದ ಚಕ್ರವರ್ತಿ ೭ ನೆಯ ವಿಷ್ಣುವರ್ಧನನ ಸಾಮಂತ ಕುಸುಮಶ್ರೇಷ್ಠಿ. ಈಗಿನ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಗೊಂಡೆಯ ಅರಸ. ಕುಸುಮಾಂಬೆ ಆತನ ಮಡದಿ. ಅವರು ಪುತ್ರಕಾಮೇಷ್ಟಿ ಯಾಗವನ್ನು ಮಾಡಿ ಪಡೆದ ಮುದ್ದಿನ ಕುವರಿಯೇ ವಾಸವಿ. ಬಾಲ್ಯದಿಂದಲೂ ಆಕೆಗೆ ಸುಖಭೋಗಗಳ ಬಗೆಗೆ ನಿರಾಸಕ್ತಿ. ಪ್ರೌಢಳಾಗುತ್ತಾ ಬೆಳೆದಂತೆ ಹೊರಗಣ ದೇಹಸೌಂದರ್ಯದಂತೆ ಆಂತರ್ಯದ ಐಸಿರಿಯೂ ಬೆಳೆಯಿತು.
ಒಮ್ಮೆ ಚಕ್ರವರ್ತಿ ವಿಷ್ಣುವರ್ಧನನು ಜೈತ್ರಯಾತ್ರೆ ಮುಗಿಸಿ ಪೆನುಗೊಂಡಕ್ಕೆ ಬಂದ; ವಾಸವಿಯ ಅಲೌಕಿಕ ಚೆಲುವಿಗೆ ಮಾರುಹೋಗಿ ತನಗೆ ಮದುವೆಯಾಗಿದ್ದರೂ ವಯಸ್ಸಿನಲ್ಲಿ ಅಜಗಜಾಂತರ ವ್ಯತ್ಯಾಸವಿದ್ದರೂ ಮದುವೆಯಾಗಲು ಬಯಸಿದ. ದಿಕ್ಕೇ ತೋಚದೆ ಕುಸುಮಶ್ರೇಷ್ಠಿ ಸಮಾಲೋಚಿಸಲು ಕರೆದ ಪುರಪ್ರಮುಖರ ಸಭೆಯಲ್ಲಿ ಬಹತೇಕರು ಚಕ್ರವರ್ತಿ ಬಯಸಿದಂತೆ ವಾಸವಿಯನ್ನು ಮದುವೆ ಮಾಡಿಕೊಡುವುದೇ ಕ್ಷೇಮವೆಂದು ಅಭಿಪ್ರಾಯಪಟ್ಟರು. ಕೆಲವರು ಮಾತ್ರ ಬಲವಂತದ ಮದುವೆಗೆ ಒಪ್ಪದೆ, ಹೇಡಿಗಳಂತೆ ಸ್ವಾಭಿಮಾನವನ್ನು ಬಲಿಗೊಟ್ಟು ನೂರುವರ್ಷ ಬಾಳುವುದಕ್ಕಿಂತ ಎದುರಿಸಿ ಹೋರಾಡಿ ಸಾಯೋಣವೆಂದರು. ಈ ಮಾತುಗಳಿಂದ ಕುಸುಮಶ್ರೇಷ್ಠಿ ಪ್ರೇರಿತನಾದ; ಮನಸ್ಸ್ಸಿಲ್ಲದಿದ್ದರೂ ಮದುವೆ ಮಾಡಿಕೊಡಲೊಪ್ಪಿ ಸೋತು ಶರಣಾಗುವುದಕ್ಕಿಂತ ಯುದ್ಧವನ್ನು ಮಾಡಿ ಸಾಯುವುದೇ ಶ್ರೇಯಸ್ಕರವೆಂದು ನಿರ್ಧರಿಸಿದ.

ವಿಷ್ಣು ವರ್ಧನನಾಗಲೀ ಪುರಪ್ರಮುಖರಾಗಲೀ ಕುಸುಮಶ್ರೇಷ್ಠ್ಠಿಯಾಗಲೀ ವಾಸವಿಯ ಅಭಿಪ್ರಾಯವೇನೆಂದು ಕೇಳದೆಯೇ ನಿರ್ಧಾರಕ್ಕೆ ಬಂದಿದ್ದರು. ಚಕ್ರವರ್ತಿ ಕೈಹಿಡಿಯುವನೆಂದರೆ ಸಂಭ್ರಮಪಡುವಂತಹ ಹೆಣ್ಣಾಗಿರಲಿಲ್ಲ ವಾಸವಿ! ವಾಸ್ತವವಾಗಿ ಆಕೆ ಬಯಸುತ್ತಿದ್ದುದು ಮೋಕ್ಷಸಾಧನೆಯನ್ನೇ ಹೊರತು ಭವಬಂಧನವನ್ನಲ್ಲ. ತಾನು ಮದುವೆಯನ್ನು ನಿರಾಕರಿಸಿದರೆ ಕಾಮಾಂಧನಾದ ಚಕ್ರವರ್ತಿ ಸುಮ್ಮನಿದ್ದಾನೇ? ತನ್ನವರನ್ನು ಯುದ್ಧಕ್ಕೆ ತಳ್ಳಲೂ ಇಷ್ಟವಿರಲಿಲ್ಲ. ಹಾಗಂತ ತನ್ನ ಆಧ್ಯಾತ್ಮ ಸಾಧನೆಗೆ ತಿಲಾಂಜಲಿ ನೀಡಲೂ ಮನಸ್ಸು ಒಪ್ಪಲಿಲ್ಲ. ಹಿಂಸೆಯನ್ನು ಅಹಿಂಸೆಯಿಂದ ಎದುರಿಸುವ ನಿರ್ಧರಕ್ಕೆ ಆಕೆ ಬಂದಳು. ತನ್ನ ಒಳಗಣ ಸೌಂದರ್ಯವನ್ನು ನೋಡದೆ ಬರೀ ಬಾಹ್ಯ ಸೌಂದರ್ಯವನ್ನು ನೋಡಿ ಮರುಳಾದ ಚಕ್ರವರ್ತಿಗೆ ಬುದ್ಧಿಯನ್ನು ಕಲಿಸುವುದು. ದೇಹ ಸೌಂದರ್ಯವನ್ನು ಅಗ್ನಿಗೆ ಅರ್ಪಿಸಿಕೊಂಡು ಬಲಿದಾನ ಮಾಡುವುದು! ಇಂತಹ ನಿರ್ಧಾರ ಜಗತ್ತಿನ ಇತಿಹಾಸದಲ್ಲಿ ಅತಿ ವಿರಳ! ಹನಿ ರಕ್ತವೂ ಹರಿಯದೆ ನಡೆದ ಘನಘೋರ ಯುದ್ಧ! ಅದರಲ್ಲಿ ಸೋತು ಹೋದ ಚಕ್ರವರ್ತಿ. ಹಿಂಸೆಯನ್ನು ಎದುರಿಸುವ ಅಸಾಧಾರಣ ಶಕ್ತಿ ಅಹಿಂಸೆಗಿದೆ ಎಂದು ತೋರಿಸಿದ ಅನನ್ಯ ಸಂದರ್ಭವದು.
ವಾಸವಿಯ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯು ಬೆಂಬಲಕ್ಕೆ ಇಡೀ ಸಮಷ್ಟಿಯೇ ನಿಂತದ್ದು ಮಾನವ ಕುಲದ ಇತಿಹಾಸದಲ್ಲಿ ಒಂದು ದಾಖಲೆಯೇ ಸರಿ. ಬೆಂಬಲವೆಂದರೆ ನೆನೆಸಿಕೊಂಡರೇ ಸಾಕು ರೋಮಾಂಚನಗೊಳ್ಳುವಂತಹದ್ದು! ವಾಸವಿಯೊಂದಿಗೆ ೧೦೨ ಗೋತ್ರದ ದಂಪತಿಗಳು ಸಹ ಅಗ್ನಿಪ್ರವೇಶ ಮಾಡಿದರು. ಗೋದಾವರಿ ತೀರದಲ್ಲಿ ಉರಿವ ಬೆಂಕಿಯ ಕೆನ್ನಾಲಗೆಗೆ ಆಹುತಿಯಾಗಿ ಕೆಲವೇ ಕ್ಷಣಗಳಲ್ಲಿ ೨೦೫ ಜೀವಗಳು ಬೂದಿಯಾಗಿ ಹೋದವು. ದೇಹಗಳು ಅಳಿದು ಬಯಲದೇಹಿಗಳಾಗಿ ಚಿರಂಜೀವಿಗಳಾದರು. ನಂಬಿದ ತತ್ವಗಳಿಗೆ ತಮ್ಮ ಬದುಕನ್ನು ಅರ್ಪಿಸಿಕೊಂಡು ಮರಣದಲ್ಲಿ ಮಹಾನವಮಿಯನ್ನು ಆಚರಿಸಿಕೊಂಡರು.

ಲೋಕಮಾತೆ ವಾಸವಿಯ ದೇವಾಲಯಗಳು ದಕ್ಷಿಣ ಭಾರತದ ಉದ್ದಗಲಕ್ಕೂ ಇವೆ. ಗಂಡುಮೆಟ್ಟಿನ ನಾಡೆಂದೇ ಇತಿಹಾಸದಲ್ಲಿ ಪ್ರಸಿದ್ಧವಾದ ಚಿತ್ರದುರ್ಗದಲ್ಲಿ ನಗರದ ಚಿಕ್ಕಪೇಟೆಯ ಕನ್ಯಕಾ ಪರಮೇಶ್ವರಿ ದೇವಾಲಯವೂ ಪುರಾತನವಾದುದು. ದೇವಾಲಯದ ನಾಗಾಭರಣ ಹಾಗೂ ಜಲಪಾತ್ರೆಗಳ ಮೇಲಿನ ಬರೆಹಗಳು ಇದಕ್ಕೆ ಸಾಕ್ಷಿಯಾಗಿವೆ. ೧೨.೨.೧೮೬೦ ರಂದು ಮಾಡನಾಯ್ಕನಹಳ್ಳಿ ಅನಂತಯ್ಯಶೆಟ್ಟಿ ಎಂಬುವವರು ದಾನ ನೀಡಿದ ಉಲ್ಲೇಖ ಜಲಪಾತ್ರೆಯ ಮೇಲಿದೆ. ೧೨.೧೦.೧೯೧೫ ರಲ್ಲಿ ಕಾಶಿ ನಾರಾಣಪ್ಪ ಎಂಬುವವರು ನಾಗಾಭರಣ ದಾನ ನೀಡಿರುವ ಉಲ್ಲೇಖವೂ ಇದೆ. ೧೮೬೦ ಕ್ಕಿಂತ ಪೂರ್ವದಲ್ಲಿಯೇ ದೇವಸ್ಥಾನ ಇಲ್ಲಿ ಇದ್ದಿರಲೇಬೇಕೆಂದು ನಿಶ್ಚಯಿಸಬಹುದು. ಆರಂಭದಲ್ಲಿ ಕನ್ಯಕಾ ಪರಮೇಶ್ವರಿ ಮೂರ್ತಿ ಇರಲಿಲ್ಲ. ಕಳಸವನ್ನು ಪೂಜೆ ಮಾಡುತ್ತಿದ್ದರು. ನಂತರದಲ್ಲಿ ಉತ್ಸವ ಮೂರ್ತಿಯನ್ನು ಮಾಡಿಸಿ ಪೂಜೆಗೆ ಆರಂಭಿಸಿದಂತೆ ಕಾಣುತ್ತದೆ.

ನಂತರದಲ್ಲಿ ಕಟ್ಟಲಾದದ್ದೇ ವಾಸವಿ ಮಹಲ್ ರಸ್ತೆಯಲ್ಲಿರುವ ವಾಸವಿ ದೇವಾಲಯ. ದೇವಾಲಯ ನಿರ್ಮಾಣದ ಹಿಂದೆ ಪವಾಡಸದೃಶವಾದ ಘಟನೆಯಿದೆ. ೧೯೬೦ ರಲ್ಲಿ ವೈಶ್ಯ ಮುಖಂಡರಾದ ಆರ್.ಕೆ ಸತ್ಯನಾರಾಯಣ ಶೆಟ್ಟರ ಕನಸಿನಲ್ಲಿ ಕನ್ಯಕಾ ಪರಮೇಶ್ವರಿ ಅಮ್ಮನವರು ಕಾಣಿಸಿಕೊಂಡು ಇಂಥದೇ ನಿವೇಶನದಲ್ಲಿ ದೇವಸ್ಥಾನವನ್ನು ನಿರ್ಮಿಸಬೇಕೆಂದು ಪ್ರೇರಣೆ ನೀಡಿದರು. ಮಾರನೆಯ ದಿನವೇ ಮುಖಂಡರು ಸಭೆಯನ್ನು ಸೇರಿ ಸಮಾಲೋಚಿಸಿದರು. ತಾಯಿಯು ಕನಸಿನಲ್ಲಿ ಸೂಚಿಸಿದ ನಿವೇಶನವನ್ನು ಖರೀದಿ ಮಾಡಬೇಕೆಂದು ತೀರ್ಮಾನವಾಯಿತು. ನಿವೇಶನದ ಮಾಲೀಕ ಸಾಹುಕಾರ್ ವೀರಭದ್ರಪ್ಪನವರಿಂದ ಅದನ್ನು ಖರೀದಿ ಮಾಡಿದರು. ದೇವಾಲಯ ಕಟ್ಟುವ ಕಾರಣಕ್ಕಾಗಿ ಅದನ್ನು ಕಡಿಮೆ ಬೆಲೆಗೆ (೯೬೦೦೦ ರೂಗಳಿಗೆ) ಮಾರಲು ವೀರಭದ್ರಪ್ಪನವರು ಸಮ್ಮತಿಸಿದರು.

ದೇವಸ್ಥಾನಕ್ಕಿಂತ ಮೊದಲು ವಾಸವಿ ಮಹಲನ್ನು ನಿರ್ಮಿಸಲಾಯಿತು (೧೯೭೨). ತರುವಾಯ ಅಧ್ಯಕ್ಷರಾದ ವಿ.ಜಿ ಶೆಟ್ರು ದೇವಸ್ಥಾನ ನಿರ್ಮಾಣಕ್ಕೆ ಆದ್ಯತೆ ನೀಡಿದರು. ಎಲ್ ಈಶ್ವರ ಶೆಟ್ಟರು ಹೆಗಲೆಣೆಯಾಗಿ ನಿಂತರು. ದ್ರವ್ಯ ಉದಾರವಾಗಿ ಹರಿದು ಬಂದಿತು. ದೇವಾಲಯದ ಕಾರ್ಯ ಪೂರ್ಣಗೊಂಡಿತು. ೧೯೭೮ ಫೆಬ್ರವರಿ ೨೦ ರಂದು ಪ್ರತಿಷ್ಠಾಪನಾ ಕಾರ್ಯ ವಿಜೃಂಭಣೆಯಿಂದ ನೆರವೇರಿತು. ಆರ್ಯ ವೈಶ್ಯ ಸಂಘದ ಸುವರ್ಣ ಮಹೋತ್ಸವ ಹಾಗೂ ೫೨ ಅಡಿ ಎತ್ತರದ ರಾಜಗೋಪುರದ ನಿರ್ಮಾಣ ಹಾಗೂ ಪ್ರತಿಷ್ಠಾಪನಾ ಕಾರ್ಯಗಳು ೧೯.೪.೧೯೯೯ ರಂದು ನಡೆದವು.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here