ಕೇಳಿದನ್ನು ಕರುಣಿಸುವ ಕಾರ್ಯಸಿದ್ದಿ ಆಂಜನೇಯ ದೇವರು.

0
1532

ಬೆಂಗಳೂರಿನಲ್ಲೊಂದು ಅಪರೂಪದ ಪ್ರಾಣ ದೇವರ ದೇವಾಲಯವಿದೆ. ಇಲ್ಲಿರುವ ಹನುಮನಿಗೆ ಕಾರ್ಯಸಿದ್ಧಿ ಹನುಮ ಎಂಬ ಹೆಸರು. ಕಾರ್ಯಸಿದ್ಧಿ ಪದವೇ ಹೇಳುವಂತೆ, ಮನದಲ್ಲಿ ಅಂದುಕೊಂಡ ಕಾರ್ಯ ಎಲ್ಲವೂ ಸಿದ್ಧಿಸುವ ಅಥವಾ ಈಡೇರುವ ಪವಿತ್ರ ತಾಣವೇ ಕಾರ್ಯಸಿದ್ಧಿ ಆಂಜನೇಯ ದೇಗುಲ.

ಅರಮನೆಗಳ ನಗರಿ ಮೈಸೂರಿನಲ್ಲಿರುವ ಅವಧೂತ ದತ್ತ ಪೀಠದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಬೆಂಗಳೂರಿನ ನೈಋತ್ಯ ಭಾಗದಲ್ಲಿರುವ ಗಿರಿನಗರದಲ್ಲಿ ಸ್ಥಾಪಿಸಿರುವ ಅವಧೂತ ದತ್ತಪೀಠದ ಶಾಖೆಯಲ್ಲಿ 2002ರಲ್ಲಿ ಭವ್ಯ ಮಂದಿರ ನಿರ್ಮಿಸಿ, ಕಾರ್ಯಸಿದ್ಧಿ ಆಂಜನೇಯನನ್ನು ಪ್ರತಿಷ್ಠಾಪಿಸಿದ್ದಾರೆ.

ಆಂಜನೇಯನ ಆರಾಧಕರಾದ ಸ್ವಾಮೀಜಿ ಮೊದಲಿಗೆ 1977ರಲ್ಲಿ ಚೆನ್ನೈನ ಆಶ್ರಮದಲ್ಲಿ ಕಾರ್ಯಸಿದ್ಧಿ ಆಂಜನೇಯನ ಪುಟ್ಟ ದೇವಾಲಯ ಕಟ್ಟಿಸಿ, ಎಲ್ಲ ಭಕ್ತರ ಸಂಕಷ್ಟ ದೂರ ಮಾಡಿ, ಅವರ ಮನೋಭಿಷ್ಠ ಈಡೇರಿಸುವಂತೆ ಕೋರಿ, ಈ ಪೂರ್ಣಫಲ ಸಮರ್ಪಣೆಯ ವ್ರತಕ್ಕೆ ನಾಂದಿ ಹಾಡಿದರಂತೆ. ಪೂರ್ಣ ಫಲ ಸಮರ್ಪಿಸಿ ದೇವರ ಪೂಜೆ ಸಲ್ಲಿಸಿದ ಭಕ್ತರೆಲ್ಲರೂ ತಾವು ಅಂದು ಕೊಂಡಿದ್ದು ನೆರವೇರಿದೆ ಎಂದು ಬಂದು ಹೇಳುತ್ತಿದ್ದರಂತೆ.

ಇದೇ ಸ್ಫೂರ್ತಿಯಲ್ಲಿ ಗಿರಿನಗರ ಶಾಖೆಯಲ್ಲಿ ಕೂಡ ಸ್ವಾಮೀಜಿ ಕಾರ್ಯಸಿದ್ಧಿ ಹನುಮನ ಗುಡಿ ಕಟ್ಟಿಸಿದ್ದಾರೆ. ಇಲ್ಲಿಗೆ ಬರುವ ಭಕ್ತರು ಹಲವು ಕೋರಿಕೆಗಳನ್ನು ಹೊತ್ತು ಬರುತ್ತಾರೆ. ದೇವಾಲಯದ ಮಂಡಳಿಯೇ ನೀಡುವ ಮೂಟೆ ಹುರಿ ದಾರ ಪೋಣಿಸಿದ ಸುಲಿಯದ ಮಟ್ಟೆ ಸಹಿತವಾದ ತೆಂಗಿನ ಕಾಯಿಯನ್ನು ಹಿಡಿದು, ದೇವರ ಎದುರು ಸಂಕಲ್ಪ ಮಾಡಿ, ದೇವಾಲಯದ ಆವರಣದಲ್ಲಿರುವ ಕಬ್ಬಿಣ ಕೊಳವೆಗಳ ಸಾಲುಗಳಿಗೆ ತೆಂಗಿನಕಾಯಿ ಕಟ್ಟುತ್ತಾರೆ.

ಇದಕ್ಕೆ ಪೂರ್ಣಫಲ ಸಮರ್ಪಣೆ ಎಂದು ಹೇಳಲಾಗುತ್ತದೆ ಆ ಕಾಯಿಯನ್ನು, 16 ದಿನಗಳ ಕಾಲ ದೇವಾಲಯದಲ್ಲೇ ಬಿಟ್ಟಿರುತ್ತಾರೆ. ಆ ಕಾಯಿ ಅವರದೇ ಎಂದು ತಿಳಿಯಲೆಂದು ಅದಕ್ಕೆ ಒಂದು ಸಂಖ್ಯೆ ನೀಡಲಾಗುತ್ತದೆ. ಈ ಹದಿನಾರು ದಿನಗಳಲ್ಲಿ ಕನಿಷ್ಠ 4 ದಿನವಾದರೂ ಭಕ್ತರು ದೇವಾಲಯಕ್ಕೆ ಆಗಮಿಸಿ,

ತ್ವಮಸ್ಮಿನ್ ಕಾರ್ಯನಿರ್ಯೋಗೇ ಪ್ರಮಾಣಂ ಹರಿಸತ್ತಮ
ಹನುಮಾನ್ ಯತ್ನಮಾಸ್ಥಾಯ ದುಃಖಕ್ಷಯ ಕರೋ ಭವ.

ಎಂಬ ಮಂತ್ರವನ್ನು ಹೇಳುತ್ತಾ, 41 ಬಾರಿ ದೇವಾಲಯಕ್ಕೆ ಪ್ರದಕ್ಷಿಣೆ ಹಾಕುತ್ತಾರೆ. 16 ದಿನಗಳ ಕಾಲ ನಿತ್ಯ 108 ಬಾರಿ ಈ ಶ್ಲೋಕ ಪಠಣ ಮಾಡುತ್ತಾರೆ. 16 ದಿನಗಳ ಬಳಿಕ ಆ ಕಾಯಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಸಿಹಿ ಮಾಡಿ ಪ್ರಸಾದವೆಂದು ಮನೆಯವರೆಲ್ಲರೂ ಸ್ವೀಕರಿಸುತ್ತಾರೆ.

ಹೀಗೆ ಮಾಡಿದರೆ, ಭಕ್ತರು ಅಂದು ಕೊಂಡಿದ್ದ ಕಾರ್ಯ ಈಡೇರುತ್ತದೆ ಎಂಬುದು ನಂಬಿಕೆ. ಭಕ್ತರ ಕೋರಿಕೆ, ಅಭಿಷ್ಠ ಈಡೇರುತ್ತಿರುವುದರಿಂದಲೇ ದಿನದಿಂದ ದಿನಕ್ಕೆ ಇಲ್ಲಿ ಪೂರ್ಣಫಲ ಸಮರ್ಪಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ದೇವಾಲಯ ಮಂಡಳಿಯವರು. ಹೀಗಾಗಿಯೇ ಭಕ್ತರ ಕೋರಿಕೆ ನೆರವೇರಿಸುವ, ಬೇಡಿದ್ದನ್ನು ದಯಪಾಲಿಸುವ ಹನುಮ ಇಲ್ಲಿ ಕಾರ್ಯಸಿದ್ಧಿ ಆಂಜನೇಯ ಎಂದೇ ಖ್ಯಾತಿ ಪಡೆದಿದ್ದಾನೆ.

ಅಂದ ಹಾಗೆ ಈ ಶ್ಲೋಕವನ್ನು ರಚಿಸಿದ್ದು ಸಾಕ್ಷಾತ್ ಶ್ರೀರಾಮದೇವರ ಧರ್ಮಪತ್ನಿ ತಾಯಿ ಸೀತಾಮಾತೆಯಂತೆ. ರಾವಣ ಸೀತಾದೇವಿಯನ್ನು ಅಪಹರಿಸಿ ಅಶೋಕವನದಲ್ಲಿಟ್ಟಿದ್ದಾಗ, ರಾಮಧೂತನಾಗಿ ಹೋದ ಮಹಾನ್ ಬುದ್ಧಿಶಾಲಿ ಆಂಜನೇಯ, ತಾನು ರಾಮನ ಭಕ್ತ ಎಂಬುದನ್ನು ಸೀತೆಗೆ ಮನವರಿಕೆ ಮಾಡಿಸಿದನಂತೆ. ಆಗ ತಾಯಿ ಈ ಮೇಲಿನ ಶ್ಲೋಕ ಹೇಳಿ, ನಿನ್ನ ಪ್ರಯತ್ನದಿಂದ ತನ್ನ ದುಃಖವನ್ನು ಕಳೆಯುವಂತಾಗಲಿ ಎಂದು ಹೇಳಿದರಂತೆ. ಹೀಗಾಗಿಯೇ ಅಂದಿನಿಂದ ಆಂಜನೇಯನನ್ನು ಈ ಶ್ಲೋಕದಿಂದ ಪಠಿಸಿದರೆ ಅವರು ಅಂದುಕೊಂಡ ಕಾರ್ಯ ನೆರವೇರುತ್ತದಂತೆ.

ತಿಳಿಯಿರಿ ನಮ್ಮ  ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಬರಹಗಳು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

ಪ್ರಧಾನ ಗರ್ಭಗೃಹದಲ್ಲಿರುವ ಕೃಷ್ಣಶಿಲೆಯ ಆಂಜನೇಯನ ಮೂರ್ತಿ ಬಹಳ ಸುಂದರವಾಗಿದೆ. ದೇವಾಲಯದ ಆವರಣದಲ್ಲಿ ಅನಘ ದೇವಿ ಸಮೇತ ಶ್ರೀ ದತ್ತಾತ್ರೇಯ, ಶಿವ, ಗಣಪತಿ ಮತ್ತು ನವಗ್ರಹ ಗುಡಿಯೂ ಇದೆ. ಪ್ರತಿ ನಿತ್ಯವೂ ದೇವಾಲಯಕ್ಕೆ ನೂರಾರು ಭಕ್ತರು ಆಗಮಿಸುತ್ತಾರೆ.

1981ರ ಮಾರ್ಚ್ 30ರಂದು ಆರಂಭವಾದ ಗಿರಿನಗರದಲ್ಲಿರುವ ಆಶ್ರಮದ ಶಾಖೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ 2006ರಲ್ಲಿ ದತ್ತಪೀಠದ ಆವರಣದಲ್ಲಿ ವಿಶ್ವ ಪ್ರಾರ್ಥನಾ ಮಂದಿರ ‘ಕಾರ್ಯಸಿದ್ದಿ ಮಂಟಪ’ವನ್ನೂ ನಿರ್ಮಿಸಲಾಗಿದೆ. ಈ ಮಂದಿರ ಗೋಡೆಯ ಮೇಲೆ ಸುಂದರವಾದ ಆಂಜನೇಯನ ಗಾರೆಯ ಶಿಲ್ಪ ಅಳವಡಿಸಲಾಗಿದ. ಇದು ದೇವಾಲಯದ ಆಕರ್ಷಣೆಗಳಲ್ಲಿ ಒಂದಾಗಿದೆ.

ದೇವಾಲಯದಲ್ಲಿ ಬೆಳಗ್ಗೆ 9ರಿಂದ 12 ಮತ್ತು ಸಂಜೆ 6ರಿಂದ 8 ಗಂಟೆವರೆಗೆ ಪೂರ್ಣಫಲ ಸಮರ್ಪಣೆಯ ಕಾಯಿಯನ್ನು ನೀಡಲಾಗುತ್ತದೆ. ಇದಕ್ಕಾಗಿ ನಿರ್ದಿಷ್ಟ ಮೊತ್ತ ಪಾವತಿಸಿ ಚೀಟಿ ಬರೆಸಿದರೆ, ಅವರೇ ಕಾಯಿ ನೀಡುತ್ತಾರೆ. ಈ ದೇವಾಲಯಕ್ಕೆ ಹೋಗುವ ಮಾರ್ಗ.

ಮೇಜಿಸ್ಟಿಕ್ ಇಂದ 36B. 36A.36D.36E.36F.36G.ಸಂಖ್ಯೆಯ ಬಸ್ಸುಗಳು ಹೋಗುತ್ತವೆ. ಸ್ಯಾಟಲೈಟ್ ನಿಂದ ಸುಮಾರು 2 ಕಿಲೋಮೀಟರ್ ಆಗುತ್ತದೇ. ನೀವು ಸಹ ಈ ದೇಗುಲಕ್ಕೆ ಹೋಗಿ ಆ ಆಂಜನೇಯ ದೇವರ ಕೃಪೆಗೆ ಪಾತ್ರರಾಗಿ.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here