ಅತ್ಯಂತ ಶಕ್ತಿಶಾಲಿ ಉದ್ಭವ ಲಿಂಗ ಲೋಕನಾಥೇಶ್ವರ

0
693

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಲವಾರು ಕಡೆಗಳಲ್ಲಿ ಇರುವ ಶಿವ ದೇವಾಲಯಗಳ ಸಾಲಿನಲ್ಲಿ ಅತ್ಯಂತ ಪುರಾತನ ಮತ್ತು ಐತಿಹಾಸಿಕವಾದ ಹಿನ್ನಲೆಯನ್ನು ಹೊಂದಿರುವ ತಾಲೂಕು ಕೇಂದ್ರ ಕುಂದಾಪುರದಿಂದ ಸರಿಸುಮಾರು 10ಕಿ.ಮೀ ಅಂತರದಲ್ಲಿರುವ ಹಟ್ಟಿಯಂಗಡಿ ಶ್ರೀ ಲೋಕನಾಥೇಶ್ವರ ದೇವಸ್ಥಾನ ಒಂದು.

ಈ ದೇವಾಲಯವು ಅತ್ಯಂತ ಪುರಾತನವಾಗಿದ್ದು ಅಳುಪರ ಮತ್ತು ಶಾಂತರರಕಾಲದ ಆಳ್ವಿಕೆ ಇದ್ದಿರಬಹುದು ಎಂದು ಕೆಲವೊಂದು ಶಾಸನಗಳಿಂದ ನಮಗೆ ಮಾಹಿತಿ ಲಭ್ಯವಾಗುತ್ತದೆ. ಮಾತ್ರವಲ್ಲದೇ ಹಟ್ಟಿಯಂಗಡಿ ಜೈನ ಪ್ರಾಬಲ್ಯವನ್ನು ಹೊಂದಿದ್ದ ಪುರಾತನ ನಗರಿ ಎಂಬುದು ಇತಿಹಾಸದ ಪ್ರಕಾರ ತಿಳಿದುಬರುತ್ತದೆ. ಹಿಂದೆ ಇದು ‘ಪಟ್ಟಿಯ ನಗರಿ’ ಎಂದಿದ್ದು, ಕಾಲಾಂತರದಲ್ಲಿ ‘ಹಟ್ಟಿಯಂಗಡಿ’ ಎಂದು ಬದಲಾಯಿತು. ವಾರಹಿ  ನದಿ ದಂಡೆಯ ಮೇಲಿರುವ ಈ ದೇವಾಲಯ ಮನಸ್ಸಿಗೆ ಶಾಂತಿಯನ್ನು ನೀಡುವ ಆಧ್ಯಾತ್ಮಿಕ ತಾಣವೆಂದರೆ ತಪ್ಪಾಗಲಾರದು.

ಈ ಸ್ಥಳವು ಜೈನರ ಪ್ರಾಬಲ್ಯ ಹೊಂದಿತ್ತು ಎಂಬುದಕ್ಕೆ ಹಲವಾರು ಜೈನ ಮಂದಿರಗಳು ಇಲ್ಲಿರುವುದೆ ಸಾಕ್ಷಿ. ಅಳುಪ ರಾಜನ ಒಂದನೇ ಚಿತ್ರವಾಹನದ ರಾಣಿ ಕುಂಕುಮದೇವಿ ಈ ನಗರದಲ್ಲಿ ಒಂದು ಜೈನ ಮಂದಿರವನ್ನು(ಆನೆಸಜ್ಜೆಯ ಬಸದಿ) ಕಟ್ಟಿಸಿದಳು ಎಂದು ಇತಿಹಾಸ ಸಾರುತ್ತದೆ. ಮಾತ್ರವಲ್ಲದೆ ಹೊನ್ನಕಂಬಳಿ ಅರಸರಿಗೆ ಸೇರಿದ ಹಲವಾರು ಶಾಸನಗಳು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಕಂಡುಬರುತ್ತದೆ. ಹೀಗೆ ಇವರು ಇಲ್ಲಿನ ಸ್ವಾಮಿಗೆ ನೀಡಿದ ಧಾನ-ಧರ್ಮಗಳ ಮಾಹಿತಿ ಹೊರೆಯುತ್ತದೆ. ಈ ದೇವಸ್ಥಾನವು ಕ್ರಿ.ಶ. 8ನೇ ಶತಮಾನಕ್ಕೆ ಸೇರಿದ್ದೆಂದು ತಿಳಿದುಬರುತ್ತದೆ. ಇಲ್ಲಿನ ಗಣಪತಿ ದೇವರು ಅತ್ಯಂತ ಪ್ರಾಚೀನತೆಯನ್ನು ಹೊಂದಿದ್ದು ಸುಂದರವಾಗಿ ಕೆತ್ತಲ್ಪಟ್ಟಿದೆ. ಮಾತ್ರವಲ್ಲದೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ವಿಗ್ರಹವು ಕೂಡಾ ಸುಂದರವಾಗಿದ್ದು, ವಿಜಯನಗರ ಅರಸರ ಕಾಲಕ್ಕೆ ಸೇರಿದ್ದೆಂದು ಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಈ ದೇವಾಲಯದಲ್ಲಿ ‘ದದಿ ವಾಮನ’ ಎಂಬ ಜೈನ ಯಕ್ಷನ ಮೂರ್ತಿಯೊಂದು ಭಿನ್ನವಾದ ಸ್ಥಿತಿಯಲ್ಲಿದೆ.

ಹೀಗೆ ಇಲ್ಲಿನ ಸಂಪ್ರದಾಯವನ್ನು ಅವಲೋಕನ ಮಾಡುತ್ತಾ ಹೋದರೆ ಕೊಲ್ಲೂರು ಮೂಕಾಂಬಿಕೆ ಮತ್ತು ಲೋಕನಾಥೇಶ್ವರ ದೇವಸ್ಥಾನಕ್ಕೆ ಸಂಬಂಧವಿರುವುದು ಕಂಡುಬರುತ್ತದೆ. ಇಲ್ಲಿನ ಜಾತ್ರೆಯ ಮರುದಿನ ಕೊಲ್ಲೂರು ಜಾತ್ರೆ ನಡೆಯುತ್ತಿತ್ತು ಮಾತ್ರವಲ್ಲದೆ ಇಲ್ಲಿನ ಪ್ರಸಾದ ಕೊಲ್ಲೂರು ಕ್ಷೇತ್ರಕ್ಕೆ ತಲುಪಿ ಮುಂದೆ ಅಲ್ಲಿನ ಜಾತ್ರೆ ನಡೆಯುತ್ತಿತ್ತಂತೆ. ಆದರೆ ಈ ಸತ್ಸಂಪ್ರದಾಯಗಳು ನಿಂತು ಹಲವಾರು ಸಂವತ್ಸಗಳು ಕಳೆದಿದೆ.

ಇಲ್ಲಿ ಪಾಲ್ಗುಣ ಹುಣ್ಣಿಮೆಯಂದು ರಥೋತ್ಸವವು ನಡೆಯಲ್ಪಡುತ್ತದೆ. ಇಲ್ಲಿ ಹಲವಾರು ಜೈನ ಜಟ್ಟಿಗ ಗುಡಿ, ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಮಾರಲ ದೇವಿ ದೇವಸ್ಥಾನ ಹತ್ತಿರದಲ್ಲೇ ಇದೆ. ಮೂಲ ದೇವರ(ಲೋಕನಾಥೇಶ್ವರ) ಮೂರ್ತಿ ಉದ್ಭವಲಿಂಗವೆಂಬುದು ತಿಳಿದುಬರುತ್ತದೆ. ಶಿವಶಕ್ತಿ ಸಮೇತನಾಗಿ ಇರುವ ಕ್ಷೇತ್ರ ಮಾತ್ರವಲ್ಲದೆ ಇಲ್ಲಿ ವೈಷ್ಣವ ಪರಂಪರೆಯನ್ನು ಕಾಣಬಹುದು. ಶ್ರೀ ಲಕ್ಷ್ಮೀನಾರಾಯಣ  ಗುಡಿ ಕೂಡಾ ಈ ದೇವಾಲಯದಲ್ಲಿದೆ. ಪ್ರದಕ್ಷಿಣಾ ಪಥದ ವಾಯುವ್ಯದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸನ್ನಿಧಾನವಿದೆ. ಅಮ್ಮನವರು ದೇವಳದ ಮುಂಭಾಗದಲ್ಲಿ ಉತ್ತರಾಭಿಮುಖವಾಗಿ ಪ್ರತಿಷ್ಠಾಪಿತವಾಗಿದೆ. ಹಾಗೇ ಗಣಪತಿ ದೇವರು ದಕ್ಷಿಣದಲ್ಲಿ ಉತ್ತರಾಭಿಮುಖವಾಗಿದೆ. ಹೀಗೆ ಶ್ರೀ ದೇವಳ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕಾಣಬೇಕಾಗಿದ್ದು, ಭಕ್ತರ ಮತ್ತು ಆಸ್ತಿಕರ ಸಹಕಾರ ತುಂಭಾ ಅವಶ್ಯಕ.

LEAVE A REPLY

Please enter your comment!
Please enter your name here