ಬೆಂಗಳೂರಿನಲ್ಲಿ ಇರುವ ಶಕ್ತಿಶಾಲಿ ಶಿವನ ದೇಗುಲ

0
963

ಮಲ್ಲೇಶ್ವರದಲ್ಲಿ ಇರುವ ದಕ್ಷಿಣಮುಖ ನಂದಿ ಕಲ್ಯಾಣಿ ದೇಗುಲದ ಮಹಿಮೆ. ಬೆಂಗಳೂರಿನ ಪ್ರಮುಖ ಹಾಗೂ ಹಳೆಯ ಬಡಾವಣೆಯಾದ ಮಲ್ಲೇಶ್ವರದಲ್ಲಿ ಕಾಡುಮಲ್ಲೇಶ್ವರ ದೇವಾಲಯದ ಬಳಿ ಇರುವ ಮತ್ತೊಂದು ಪುಣ್ಯಕ್ಷೇತ್ರವೇ ದಕ್ಷಿಣಾಭಿಮುಖ ನಂದಿ ದೇಗುಲ. ಈ ದೇಗುಲವು ಭೂಮಿಯಿಂದ ತಗ್ಗು ಪ್ರದೇಶದಲ್ಲಿರುವ ಹಾಗೂ ಹಲವು ವಿಸ್ಮಯಗಳನ್ನು ಹೊಂದಿರುವ ಸ್ಥಳವಾಗಿದೆ.

ಈ ದೇಗುಲದಲ್ಲಿ ನುಣುಪಾದ ಕಪ್ಪುಕಲ್ಲಿನ ಸುಂದರ ನಂದಿಯ ವಿಗ್ರಹವಿದೆ. ನಂದಿಯ ಬಾಯಿಂದ ವರ್ಷದ 365ದಿನವೂ ದಿನದ ಎಲ್ಲ 24 ಗಂಟೆಯೂ ನಿರಂತರವಾಗಿ ಧಾರೆ ಧಾರೆಯಾಗಿ ನೀರು ಹರಿಯುತ್ತದೆ. ಹೀಗೆ ನಂದಿಯ ಬಾಯಿಂದ ಬರುವ ತೀರ್ಥ ಅಲ್ಲಿರುವ ರಂಧ್ರದ ಮೂಲಕ ಹಾದು ಕೆಳಗಿನ ಘಟ್ಟದಲ್ಲಿರುವ ಶಿವಲಿಂಗದ ಮೇಲೆ ಬೀಳುತ್ತದೆ. ಈ ವಿಸ್ಮಯ ಕಾಣಲು ನಿತ್ಯವೂ ನೂರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಈ ದೇವಾಲಯವು ನೂರಾರು ವರ್ಷಗಳ ಹಿಂದಿನ ಪುರಾತನ ದೇವಾಲಯವಾಗಿದೆ. ಆದರೆ, ಈ ದೇವಾಲಯ ವಿಚಾರಗಳು ತಿಳಿದದ್ದು ಕೇವಲ 13 ವರ್ಷಗಳ ಹಿಂದಷ್ಟೇ. ಹಲವು ದಶಕಗಳ ಹಿಂದೆಯೇ ಈ ದೇವಾಲಯವನ್ನು ಮಣ್ಣಿನಲ್ಲಿ ಮುಚ್ಚಿದ್ದರು, ಆದರೆ ಯಾಕೆ ಎಂದು ಗೊತ್ತಿಲ್ಲ.

ಒಂದೂವರೆ ದಶಕದ ಹಿಂದೆ ಈಗ ದಕ್ಷಿಣಮುಖ ನಂದಿ ಕಲ್ಯಾಣಿ ಇರುವ ಜಾಗದಲ್ಲಿ ಬಾಳೆಯ ತೋಟವಿತ್ತು. ತೆಂಗಿನ ಮರಗಳಿದ್ದವು. ಈ ಜಾಗದಲ್ಲಿ ವಾಣಿಜ್ಯ ಸಮುಚ್ಚಯ ನಿರ್ಮಿಸಲು ಖಾಸಗಿಯವರು ಮುಂದಾಗಿದ್ದರು.ಆಗ ತಳಪಾಯಕ್ಕಾಗಿ ಅಗೆಯುವಾಗ ಕಲ್ಲಿನ ಕಟ್ಟಡಗಳು ಗೋಚರಿಸಿದವು. ಇಲ್ಲೊಂದು ದೇವಾಲಯ ಇರುವ ಸುಳಿವು ದೊರೆಯಿತು. ಇದನ್ನು ಕಂಡ ಸ್ಥಳೀಯರು ಬಿ.ಕೆ. ಹರಿಪ್ರಸಾದ್ ಹಾಗೂ ಬಿ.ಕೆ. ಶಿವರಾಂ ಅವರ ಬೆಂಬಲ ಮಾರ್ಗದರ್ಶನದಲ್ಲಿ ಬಹಳ ಜಾಗರೂಕತೆಯಿಂದ ಅಲ್ಲಿದ್ದ ಮಣ್ಣು ಕಲ್ಲು ತೆಗೆಸಿದಾಗ ನಂದಿಯ ಕೊಂಬು ಕಾಣಿಸಿತು. ಮತ್ತೆ ಆಗೆದು ಶುಚಿಗೊಳಿಸಿದಾಗ ನಂದಿಯ ಬಾಯಲ್ಲಿ ನೀರು ಬರುತ್ತಿರುವುದನ್ನು ನೋಡಿ ಎಲ್ಲರೂ ವಿಸ್ಮಯಗೊಂಡರು. ನಂತರ ಅದನ್ನು ಮತ್ತಷ್ಟು ಅಗೆದಾಗ ಎರಡನೇ ಹಂತದಲ್ಲಿ ಶಿವಲಿಂಗ ಹಾಗೂ ಕೆಳಗೆ ಹಲವು ಸೋಪಾನಗಳು ಪುರಾತನ ಕಲ್ಯಾಣಿಯೂ ಗೋಚರಿಸಿತು.

ಈ ವಿಸ್ಮಯ ನೋಡಲು ಸಾವಿರಾರು ಭಕ್ತರು ಆಗಮಿಸಿದರು. ಎಲ್ಲ ಶಿವದೇವಾಲಯಗಳಲ್ಲಿ ಲಿಂಗದ ಎದುರು ನಂದಿ ಇದ್ದರೆ ಇಲ್ಲಿ ಶಿವಲಿಂಗದ ಮೇಲೆ ನಂದಿ ಇರುವುದು ಮತ್ತೊಂದು ವಿಸ್ಮಯವಾಗಿದೆ. ನಂದಿಯ ಬಾಯಲ್ಲಿ ನೀರು ಬರುವ ವಿಸ್ಮಯದ ಹಿಂದೆ ತಂತ್ರವಿರಬೇಕೆಂದು ಹಲವರು ಪರೀಕ್ಷಿಸಿದರು. ನಂದಿಯ ಬಾಯಿಗೆ ಯಾವುದೇ ಕೊಳವೆ ಅಳವಡಿಸಿಲ್ಲ. ಯಾರೂ ನೀರನ್ನು ಪಂಪ್ ಮಾಡುತ್ತಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ಶಿವನಿಗೆ ನಮಸ್ಕರಿಸಿ ಬಂದದಾರಿಗೆ ಸುಂಕವಿಲ್ಲವೆಂದು ಹೋದರು.

ಈ ಸ್ಥಳ ಪುರಾಣದ ಬಗ್ಗೆ ನೋಡಿದಾಗ ಗೌತಮ ಮಹರ್ಷಿಗಳ ಕೋರಿಕೆಯ ಮೇರೆಗೆ ವಾಯವ್ಯದಿಕ್ಕಿಗೆ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ವೃಷಭಾವತಿ ಇಲ್ಲಿ ಬಸವನ ಬಾಯಿಂದ ಬರುತ್ತಿದ್ದಾಳೆ. ಇಲ್ಲಿ ಸಹಜವಾಗಿ ನಂದಿಯ ಬಾಯಿಂದ ಹರಿಯುವ ಶುದ್ಧ ನೀರು ಖನಿಜಯುಕ್ತವಾಗಿದ್ದು, ಹಲವು ರೋಗಗಳ ನಿವಾರಕ ಎಂದೇ ಖ್ಯಾತವಾಗಿದೆ.

ಪ್ರತಿ ಸೋಮವಾರ ಹಾಗೂ ಗುರುವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಇಲ್ಲಿಗೆ ಬರುವ ಭಕ್ತರು, ದೇವರನ್ನು ಪೂಜಿಸಿ, ನಂದಿಯ ಬಾಯಿಂದ ಶಿವಲಿಂಗದ ಮೇಲೆ ಬಿದ್ದು ಕಲ್ಯಾಣಿಗೆ ಹರಿವ ನೀರನ್ನು ತೀರ್ಥವೆಂದು ಸ್ವೀಕರಿಸುತ್ತಾರೆ. ಈ ನೀರು ಕುಡಿವ ಭಕ್ತರಲ್ಲಿ ನವಚೈತನ್ಯ ಮೂಡುತ್ತದೆ, ಚರ್ಮವ್ಯಾದಿಯೇ ಮೊದಲಾದ ರೋಗಗಳು ನಿವಾರಣೆಯಾಗುತ್ತವೆ. ಕೆಲವು ಭಕ್ತರು ವಿದೇಶಕ್ಕೂ ಈ ತೀರ್ಥವನ್ನು ಕಳುಹಿಸುತ್ತಾರೆ.

ಮನೆ ಕಟ್ಟುವವರು ಗುದ್ದಲಿ ಪೂಜೆಗೆ, ಕೊಳವೆ ಬಾವಿ ತೋಡಿಸುವವರು ಗಂಗಾಪೂಜೆಗೆ, ಮದುವೆ, ಮುಂಜಿ ಇತ್ಯಾದಿ ಶುಭ ಸಮಾರಂಭಗಳಿಗೂ ಭಕ್ತರು ಇಲ್ಲಿಂದ ಪವಿತ್ರ ತೀರ್ಥವನ್ನು ತೆಗೂಡುಕೊಂಡು ಹೋಗುತ್ತಾರೆ. ಇಲ್ಲಿರುವ ಶಿವಲಿಂಗ ನಾಗಾಭರಣ ಅಲಂಕಾರದಲ್ಲಿ ಸುಂದರವಾಗಿ ಕಂಗೊಳಿಸುತ್ತದೆ. ರಾತ್ರಿಯ ವೇಳೆ ದೀಪಾಲಂಕಾರದಲ್ಲಿ ಶಿವಲಿಂಗ ದರ್ಶನ ವರ್ಣನಾತೀತ ಅನುಭವ ನೀಡುತ್ತದೆ.

ಶಿವಲಿಂಗ ಹಾಗೂ ನಂದಿಯ ಹಿಂಭಾಗದ ಭಿತ್ತಿಗಳಲ್ಲಿ ಸುಂದರ ಕೆತ್ತನೆಗಳೂ ಇವೆ. ಈಗ ಪ್ರವೇಶ ದ್ವಾರದಲ್ಲಿ ಗೋಪುರ ನಿರ್ಮಿಸಲಾಗಿದೆ. ಗೋಪುರದಲ್ಲಿ ಶಿವಪಾರ್ವತಿ ಹಾಗೂ ಮೇಲ್ಭಾಗದಲ್ಲಿ ನಂದಿಯ ಮೂರ್ತಿಯೂ ಇದೆ. ದೇವಾಲಯ ಪ್ರವೇಶಿಸುತ್ತಿದ್ದಂತೆ ಶಿವದರ್ಶನಕ್ಕೆ ಮುನ್ನ ಗಣಪತಿಯ ದರ್ಶನವಾಗುತ್ತದೆ. ದೇವಾಲಯದ ಮುಂದೆ ಕಲ್ಯಾಣಿ ಇದೆ. ಇಲ್ಲಿ ಹತ್ತಾರು ಆಮೆಗಳೂ ಸಹ ಇವೆ.

ಈ ದೇಗುಲದ ಪೂಜಾ ಸಮಯ:
ಬೆಳಗ್ಗೆ 7ರಿಂದ ಮಧ್ಯಾಹ್ನ 12-30, ಸಂಜೆ 5ರಿಂದ ರಾತ್ರಿ 8-30ರವರೆಗೆ.

ಈ ದೇಗುಲಕ್ಕೆ ಹೋಗುವ ಮಾರ್ಗ. ಮೇಜಿಸ್ಟಿಕ್ ಇಂದ 4.5 ಕಿಲೋಮೀಟರ್ ಆಗುತ್ತದೆ. ಇಲ್ಲಿಗೆ ಹೋಗುವ ಬಸ್ ಗಳು.  276A. 276D.276C.276E.276F. ಗಳ ಬಸ್ ಹೋಗುತ್ತವೆ.

ಈ ವಿಸ್ಮಯ ದೇಗುಲವನ್ನು ಒಮ್ಮೆ ಹೋಗಿ ನೀವು ನೋಡಿ ನಂದಿಯ ತೀರ್ಥ ಪಡೆದು. ದರ್ಶನ ಪಡೆಯಿರಿ.

ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಾ ಎಲ್ಲ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತದೆ. ಯಾರಾದರು ಕದ್ದಲ್ಲಿ ಅಥವಾ ಮಾಹಿತಿ ಕಾಪಿ ಮಾಡಿ ಬೇರೆ ಕಡೆ ಹಾಕಿದಲ್ಲಿ ಅಂತ ಜನರ ವಿರುದ್ದ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಚ್ಚರಿಕೆ.

LEAVE A REPLY

Please enter your comment!
Please enter your name here