ಚಳಿಗಾಲ ಬಂತೆಂದರೆ ಒಂದಲ್ಲಾ ಒಂದು ಸಮಸ್ಯೆ ಗಳು ನಮ್ಮನ್ನು ಕಾಡುತ್ತದೆ. ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುವ ಕಾರಣ ನಮ್ಮ ದೇಹದ ಉಷ್ಣತೆ ಕೂಡ ತುಂಬಾ ಕಡಿಮೆಯಾಗುತ್ತದೆ. ಇದರಿಂದ ನಮ್ಮ ದೇಹದ ರಕ್ತದ ಚಲನೆಯ ವೇಗ ಕೂಡ ಕಡಿಮೆಯಾಗುತ್ತದೆ. ಇದರಿಂದ ನಮ್ಮ ದೇಹದ ಸಂದುಗಳಲ್ಲಿ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳು ಕೂಡ ಹೆಚ್ಚಾಗಿ ಕಾಡುತ್ತದೆ ಇದರಿಂದ ನಮ್ಮ ಮೈಕೈ ಚರ್ಮಗಳು ಹೆಚ್ಚು ಬಿರಿಯುತ್ತದೆ. ಚಳಿಗಾಲದಲ್ಲಿ ಸೋಂಕುಗಳು ಬಹಳ ಬೇಗ ಹರಡುತ್ತದೆ ಮತ್ತು ಗಾಯಗಳಾದರೆ ಅದು ಬೇಗ ವಾಸಿಯಾಗುವುದಿಲ್ಲ ಆದ್ದರಿಂದ ಚಳಿಗಾಲದಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತವಾಗಿರಬೇಕು. ನಮ್ಮ ಮನೆಯಲ್ಲೇ ಸಿಗುವ ಸಣ್ಣ ಪುಟ್ಟ ಪದಾರ್ಥಗಳಿಂದ ಚಳಿಗಾಲದಲ್ಲಿ ಉಂಟಾಗುವ ಅಲರ್ಜಿ ಗಳಿಂದ ಪಾರಾಗಬಹುದು.
ಪ್ರತಿನಿತ್ಯ ಬ್ಲಾಕ್ ಟಿ ಯನ್ನು ಬೆಳಗ್ಗೆ ಮತ್ತು ಸಂಜೆ ಕುಡಿಯುವುದರಿಂದ ನಮ್ಮ ಆರೋಗ್ಯದಲ್ಲಿ ಉತ್ತಮ ಬದಲಾವಣೆಯನ್ನು ಕಾಣಬಹುದು. ಇದರಲ್ಲಿ ಆಂಟಿಆಕ್ಸಿಡೆಂಟ್ ಅಂಶ ಜಾಸ್ತಿ ಇರುವುದರಿಂದ ಇದು ನಮ್ಮ ದೇಹದಲ್ಲಿರುವ ಕೊಬ್ಬಿನಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ನಮ್ಮ ದೇಹ ತುಂಬಾ ಹಗುರವಾಗಿ ಹೆಚ್ಚು ಲವಲವಿಕೆಯಿಂದ ಇರಬಹುದು. ಆದ್ದರಿಂದ ಪ್ರತಿನಿತ್ಯ ಬ್ಲಾಕ್ ಟೀ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಂಬೆ ಹಣ್ಣಿನ ಉಪಯೋಗ ಯಾರಿಗೆ ತಿಳಿದಿಲ್ಲ ಹೇಳಿ. ಬೆಳಗ್ಗೆ ಹೊತ್ತು ನಿಂಬೆಹಣ್ಣಿನ ರಸವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯುವುದರಿಂದ ಚಳಿಗಾಲದಲ್ಲಿ ಉಂಟಾಗುವ ಸಮಸ್ಯೆಗಳಿಂದ ಮುಕ್ತಗೊಳ್ಳಬಹುದು. ಪ್ರತಿನಿತ್ಯ ನಿಂಬೆ ಹಣ್ಣಿನ ಜ್ಯೂಸನ್ನು ಕುಡಿಯುವುದರಿಂದ ನಮ್ಮ ದೇಹದ ತೂಕ ಕೂಡ ಕಡಿಮೆಯಾಗುತ್ತದೆ. ಶೀತ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳು ಕೂಡ ಕಡಿಮೆಯಾಗುತ್ತದೆ.
ಬೆಳ್ಳುಳ್ಳಿಯು ನಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುವಲ್ಲಿ ಅತ್ಯಂತ ಪರಿಣಾಮಕಾರಿ ಪದಾರ್ಥವಾಗಿದೆ. ಬೆಳ್ಳುಳ್ಳಿಯನ್ನು ಹೆಚ್ಚಾಗಿ ಸೇವಿಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಪ್ರತಿನಿತ್ಯ ಬೆಳಗ್ಗೆ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಮ್ಮ ದೇಹದ ಆಲಸ್ಯ ಕಡಿಮೆಯಾಗಿ ಹೆಚ್ಚು ಲವಲವಿಕೆಯಿಂದ ಇರಬಹುದು ಮತ್ತು ಬೆಳ್ಳುಳ್ಳಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಇರುವುದರಿಂದ ಚಳಿಗಾಲದಲ್ಲಿ ಆಗುವ ಅಲರ್ಜಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಚಳಿಗಾಲದಲ್ಲಿ ಶೀತ ಕೆಮ್ಮು ನೆಗಡಿ ಆಗುವುದು ಸರ್ವೇ ಸಾಮಾನ್ಯ. ಶುಂಠಿಯ ಕಷಾಯವನ್ನು ಪ್ರತಿನಿತ್ಯ ಕುಡಿಯುವುದರಿಂದ ಶೀತ ಮತ್ತು ಕೆಮ್ಮು ಕಡಿಮೆಯಾಗುತ್ತದೆ. ಗಂಟಲಿನ ನೋವಿನಿಂದ ಬಳಲುತ್ತಿದ್ದರೆ ಶುಂಠಿಯನ್ನು ನೀರು ಮತ್ತು ಜೇನುತುಪ್ಪದ ಜೊತೆಗೆ ಮಿಶ್ರಣ ಮಾಡಿ ಕುಡಿಯಿರಿ. ಇದರಿಂದ ಗಂಟಲಿನ ನೋವು ದೂರವಾಗುವುದು.
ಚಳಿಗಾಲ ಬಂತೆಂದರೆ ನಮ್ಮ ದೇಹದ ಚರ್ಮವು ಬಿರುಕು ಬಿಡಲು ಶುರು ಮಾಡುತ್ತದೆ. ಅದಕ್ಕಾಗಿ ಮಾರ್ಕೆಟ್ ನಲ್ಲಿ ಸಿಗುವ ಕೆಮಿಕಲ್ ಯುಕ್ತ ಕ್ರೀಮ್ ಗಳನ್ನು ಹಚ್ಚುವ ಬದಲು ಮನೆಯಲ್ಲೇ ಸಿಗುವ ಕೊಬ್ಬರಿ ಎಣ್ಣೆಯನ್ನು ನಮ್ಮ ಚರ್ಮಕ್ಕೆ ಪ್ರತಿನಿತ್ಯ ಹಚ್ಚುವುದರಿಂದ ಚರ್ಮ ಬಿರುಕು ಬಿಡುವುದನ್ನು ತಡೆಯಬಹುದು.