ಅತ್ಯಂತ ಶಕ್ತಿಶಾಲಿ ಜಾಲಿಕಟ್ಟಿ ಬಸವೇಶ್ವರ ಸ್ವಾಮಿ

0
966

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಜಾಲಿಕಟ್ಟೆ ಸವದತ್ತಿ ಕ್ಷೇತ್ರವು ತಾಲೂಕಾ ಕ್ಷೇತ್ರದಿಂದ 28 ಕಿ.ಮೀ. ಯರಗಟ್ಟಿ ಹಾಗೂ ಮುನವಳ್ಳಿಗಳಿಂದ 12 ಕಿಮೀ ಅಂತರದಲ್ಲಿರುವ ಒಂದು ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ಬಸವೇಶ್ವರ ದೇವಾಲಯ ಪ್ರಸಿದ್ಧವಾಗಿದ್ದು ಗ್ರಾಮದ ಅಷ್ಟೇ ಅಲ್ಲ ತಾಲೂಕಿನ ಜಿಲ್ಲೆಯ ಅನೇಕ ಸ್ಥಳಗಳ ಭಕ್ತಜನರ ಆರಾಧ್ಯ ದೈವ ಕೂಡ. ಈ ದೇಗುಲದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ಇಲ್ಲಿ ಜಾತ್ರೆ ಜರುಗುತ್ತದೆ. ಕಪ್ಪು ಕಲ್ಲಿನಲ್ಲಿ ಸುಂದರವಾದ ಕೆತ್ತನೆಯುಳ್ಳ ಎತ್ತರವಾದ ಕುಳಿತ ನಂದಿಯೇ ಶ್ರೀ ಬಸವೇಶ್ವರ. ಇದು ಹಲವು ದೇವಾಲಯಗಳನ್ನು ಹೊಂದಿದ ಸಮುಚ್ಚಯ. ಇಲ್ಲಿ ಶಿವ ಪಾರ್ವತಿ ದೇವಾಲಯ ನೀಲಾಂಬಿಕಾ ದೇವಾಲಯಗಳು ಬೆಟ್ಟದಲ್ಲಿ ಒಂದ ನೂರಾ ಹದಿನೇಳು ಬೆಟ್ಟಗಳನ್ನೇರಿ ಬಂದರೆ ಕಾಣಸಿಗುವ ಕೂಗುವ ಬಸವಣ್ಣ ಎಂಬ ಪುಟ್ಟ ದೇವಾಲಯ ಸಮುದಾಯ ಭವನ ನೀರಿನ ವ್ಯವಸ್ಥೆಗಾಗಿ ಬಾವಿ ಬೆಟ್ಟದಲ್ಲಿ ನೀರಿನ ಸಂಗ್ರಹಕ್ಕಾಗಿ ಒಂದು ಚೆಕ್ ಡ್ಯಾಂ ಗಳು ಇವೆ.

ಈ ದೇಗುಲದ ಬಗ್ಗೆ ಶರಣರ ಕಾಲದ ಕಥೆಯೊಂದು ಇದೆ ಅದು ಏನೆಂದರೆ. ಕ್ರಾಂತಿಯ ನಂತರ ಶರಣರ ದಂಡು ದೊರೆ ಬಿಜ್ಜಳನ ಉಪಟಳ ತಾಳದೇ ರಾಜ್ಯದ ಮೂಲೆ ಮೂಲೆಯಲ್ಲಿ ಸಂಚರಿಸಿದ ಘಟನೆ ಜಾಲಿಕಟ್ಟೆಗೂ ಸಂಬಂಧ ಕಲ್ಪಿಸಿದೆ. ಮಡಿವಾಳ ಮಾಚಯ್ಯ ಹಾಗೂ ಇನ್ನಿತರ ಶರಣರ ದಂಡು ಇಲ್ಲಿಗೆ ಸಮೀಪದ ಸ್ಥಳಗಳಾದ ಗೊಡಚಿ ಕಟಕೋಳ ಚುಂಚನೂರ ಮಾರ್ಗವಾಗಿ ಜಾಲಿಕಟ್ಟೆಯ ಬೆಟ್ಟ ಪ್ರದೇಶದಲ್ಲಿ ತಂಗಿದ್ದರಂತೆ. ಇಲ್ಲಿರುವ ಕಡಿದಾದ ಬೆಟ್ಟ ಅಲ್ಲಿ ಬೆಳೆದು ನಿಂತ ಸಸ್ಯ ಸಂಕುಲ ಸದಾ ಹರಿಯುವ ನೀರಿನ ಝರಿ ಶರಣರ ಇರುವಿಕೆಗೆ ಸೂಕ್ತವಾಗಿರಲು ಮಾಚಿದೇವನ ಅನುಚರರೆಲ್ಲ ಕೆಲವು ಕಾಲ ಇಲ್ಲಿ ತಂಗಿದ್ದರೆಂದು ಪ್ರತೀತಿ ಇದೆ.

ಇಂಥ ಸಂದರ್ಭದಲ್ಲಿ ಬಸವೇಶ್ವರರ ನೆನಪಲ್ಲಿ ನಂದಿಯನ್ನು ಪೂಜಿಸಿದರು ಎಂಬುದು ಕೂಡ. ಅಷ್ಟೇ ಅಲ್ಲ ಇಲ್ಲಿರುವ ಬೆಟ್ಟದಲ್ಲಿ ಬೆಳಗಿನ ಜಾವ ನಂದಿಯೊಂದು ಜೋರಾಗಿ ಕೂಗತೊಡಗಿತಂತೆ. ನಂದಿ ಯಾವ ದಿಕ್ಕಿನತ್ತ ಮುಖ ಮಾಡಿ ಕೂಗುತ್ತಿತ್ತೋ ಆ ದಿಕ್ಕಿನತ್ತ ದೃಷ್ಟಿ ಹಾಯಿಸಲು ಅದು ಇಲ್ಲಿಂದ ಸುಮಾರು 25 ಕಿಮೀ ಅಂತರದ ಚುಂಚನೂರ ಗ್ರಾಮದ ಸ್ಥಳದಿಂದ ಕೆಂಧೂಳಿ ಕಾಣತೊಡಗಿತು. ಆ ಕೆಂಧೂಳಿ ಬಿಜ್ಜಳ ಅರಸರ ಸೈನಿಕರ ಕುದುರೆಗಳ ಕಾಲ್ತುಳಿತದಿಂದ ಎದ್ದು ಚಿಮ್ಮಿದ್ದು ಕಂಡ ಶರಣರು ದೇವತಾ ಸ್ವರೂಪಿ ಬಸವಣ್ಣನೇ ನಮಗೆ ಎಚ್ಚರಿಸಿದನೆಂದು ಆ ನಂದಿ ಕೂಗಿದ ಸ್ಥಳದಲ್ಲಿ ಕೂಗುವ ಬಸವಣ್ಣ ದೇವಾಲಯ ಪ್ರತಿಷ್ಠಾಪನೆ ಮಾಡಿದರೆಂದು ಕೂಡ ಹೇಳುತ್ತರೆ.

ಇದೆ ಈ ದೇವಾಲಯ ನಿರ್ಮಾಣದ ಹಿಂದಿರುವ ಸಂಗತಿ ಎಂದು ಮಾತ್ರ ಕೇಳಿಬರುತ್ತದೆ. ಇದು ಬ್ರಿಟಿಷ್ ಆಳ್ವಿಕೆಯ ಕಾಲದ ಘಟನೆ. ಇಲ್ಲಿನ ನಂದಿ ಅದರ ಎದುರಿಗೆ ಇರುವ ಈಶ್ವರ ಲಿಂಗ ದೇವಾಲಯ ಆವರಣದಲ್ಲಿರುವ ಶಿವಪಾರ್ವತಿ ದೇವಾಲಯ ಶಿವಶರಣೆ ನೀಲಾಂಬಿಕಾ ದೇವಾಲಯ ನೂರಾ ಹದಿನೇಳು ಮೆಟ್ಟಿಲುಗಳನ್ನೇರಿ ಬಂದರೆ ಬೆಟ್ಟದಲ್ಲಿರುವ ಪುಟ್ಟ ಕೂಗು ಬಸವಣ್ಣನ ದೇವಾಲಯ ಸಸ್ಯಸಂಕುಲದಿಂದ ಗಮನ ಸಳೆಯುವ ಬೆಟ್ಟದ ಪ್ರಾಕೃತಿಕ ಸೌಂದರ್ಯ ಜನರ ಮನಸೂರೆಗೊಳ್ಳದಿರದು.

ದೇವಾಲಯ ಕೂಡ ಸುಂದರವಾಗಿದ್ದು ಶಿಖರದವರೆಗೂ ಇಲ್ಲಿ ಶರಣರ ಶಿಲ್ಪಗಳನ್ನು ಸುತ್ತಲೂ ನಿರ್ಮಿಸಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಮಾಳಗಿ ಮಾರಯ್ಯ ಇಟಗಿ ಭೀಮಾಂಬಿಕಾ ಅಂಬಿಗರ ಚೌಡಯ್ಯ ನವಿಲುಗುಂದ ನಾಗಲಿಂಗ ಸ್ವಾಮಿಗಳು ಹುಬ್ಬಳ್ಳಿಯ ಸಿದ್ಧಾರೂಢರು ದೋಹರ ಕಕ್ಕಯ್ಯ ಹಡಪದ ರಾಚಯ್ಯ ಗಂಗಾಂಬಿಕೆ ಚನ್ನ ಬಸವಣ್ಣ ಅಲ್ಲಮ ಪ್ರಭು ನಾಗನೂರಿನ ಶಿವಬಸವ ಸ್ವಾಮಿಗಳು ಶಿಶುನಾಳದ ಶರೀಫರು ಮುರಗೋಡದ ಮಹಾಂತಪ್ಪನವರು ಬಸವೇಶ್ವರ ಗರಗದ ಮಡಿವಾಳಜ್ಜ ಗುರುಗೋವಿಂದ ಭಟ್ಟರು ಮಡಿವಾಳ ಮಾಚಯ್ಯ ಅಕ್ಕಮಹಾದೇವಿ ಹೀಗೆ ಹಲವಾರು ಮೂರ್ತಿಗಳನ್ನು ಶಿಖರಗೋಪುರದ ಸುತ್ತಮುತ್ತಲೂ ನಿರ್ಮಿಸಲಾಗಿದೆ.

ಈ ದೇವಾಲಯಕ್ಕೆ ಹೊಂದಿಕೊಂಡಂತೆ ಕಲ್ಯಾಣ ಮಂಟಪವಿದ್ದು ವಿವಾಹಗಳು ಸರ್ಕಾರದ ವಿವಿಧ ಯೋಜನೆಗಳ ಕಾಯಕ್ರಮಗಳು ಈ ಕಲ್ಯಾಣ ಮಂಟಪದಲ್ಲಿ ಜರುಗುತ್ತವೆ. ಈ ದೇಗುಲದಲ್ಲಿ ಶಿವರಾತ್ರಿ ಅಮವಾಸ್ಯೆಯಂದು ಮಂತ್ರೋಚ್ಚಾರಣೆ ಕೊನೆಗೊಳಿಸಿ ಪಲ್ಲಕ್ಕಿ ಉತ್ಸವ ನೆರವೇರಿಸಿ ಅನ್ನ ಸಂತರ್ಪಣೆ ಮಾಡಿಸುವ ಮೂಲಕ ಶಿವರಾತ್ರಿ ಆಚರಣೆ ಜರುಗುತ್ತದೆ. ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಸದ್ಭಕ್ತರಿಂದ ಅನ್ನ ಸಂತರ್ಪಣೆ ನೆರವೇರುವದು ಶ್ರಾವಣ ಮಾಸದ ಕೊನೆಯ ಸೋಮವಾರದಂದು ರಥೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ.

LEAVE A REPLY

Please enter your comment!
Please enter your name here