ಇದು ಬ್ರಿಟಿಷ್ ಆಡಳಿತದ ಕಾಲಾವಧಿಯಲ್ಲಿ ನಡೆದ ಘಟನೆ ಇದು 1800 ರಲ್ಲಿ ಸರ್ ಥಾಮಸ್ ಮುನ್ರೋ ಬಳ್ಳಾರಿ ಕಲೆಕ್ಟರ್ ಆಗಿದ್ದಾಗ ಮದ್ರಾಸ್ ಸರಕಾರ ಶ್ರೀಮಠದ ಅಷ್ಟೂ ಆದಾಯವನ್ನು ಮಂತ್ರಾಲಯದಿಂದ ಪಡೆದುಕೊಳ್ಳುವಂತೆ ಆದೇಶಿಸಿತು. 1799 ರ ಅಂತಿಮ ಆಂಗ್ಲೋ ಮೈಸೂರು ಯುದ್ಧದ ನಂತರ ಟಿಪ್ಪು ಸುಲ್ತಾನನ್ನ ಕೊಂದ ಬ್ರಿಟಿಷರು ಆತನಿಂದ ವಶಪಡಿಸಿಕೊಂಡಿದ್ದ ಭೂಮಿಯನ್ನು ಒಡೆಯರ್ ಗಳಿಗೆ ಮರಳಿ ನೀಡಿ ಬಳ್ಳಾರಿಯನ್ನು ತಮ್ಮ ವಶದಲ್ಲಿಯೆ ಇಟ್ಟುಕೊಂಡಿದ್ದರು.
ಮುಂದೆ ಟಿಪ್ಪುವಿನ ಸಂತಾನ ಗಳು ಬಳ್ಳಾರಿಯನ್ನು ಮತ್ತೆ ವಶಪಡಿಸಿಕೊಳ್ಳದಿರಲೆಂದು ಮುನ್ನೆಚ್ಚರಿಕೆಯ ಕ್ರಮವಾಗಿ ಮುನ್ರೋನನ್ನು ಬಳ್ಳಾರಿಯ ಕಲೆಕ್ಟರ್ ಆಗಿ ನೇಮಿಸಿದ್ದರು. ಬ್ರಿಟಿಷರ ಕಾಲದ ದೇವಾಲಯ ಮತ್ತು ಮಠದ ಎಲ್ಲಾ ಸಂಪತ್ತನ್ನು ವಶ ಪಡಿಸಿಕೊಳ್ಳುವ ಕಾನೂನಿನ ಪ್ರಕಾರ ಮುನ್ರೋ ಕಂದಾಯ ಅಧಿಕಾರಿಗಳಿಗೆ ಮಠದ ಆದಾಯವನ್ನು ಪಡೆದುಕೊಳ್ಳುವಂತೆ ಆದೇಶ ನೀಡುತ್ತಾನೆ. ಆದರೆ ಕಾರಣಾಂತರಗಳಿಂದ ಕಂದಾಯ ಅಧಿಕಾರಿಗಳಿಗೆ ಈ ಆದೇಶವನ್ನು ಪಾಲಿಸಲು ಸಾಧ್ಯವಾಗಲಿಲ್ಲ. ಮದ್ರಾಸ್ ಸರಕಾರದಿಂದ ಮತ್ತೆ ಮತ್ತೆ ಜ್ಞಾಪನ ಪತ್ರ ಬಂದ ನಂತರ ಖುದ್ದು ಥಾಮಸ್ ಮುನ್ರೋ ಸ್ವಾಮಿಗಳ ಮಠಕ್ಕೆ ತನಿಖೆಗಾಗಿ ಭೇಟಿ ನೀಡುತ್ತಾರೆ.

ಮಠದ ಆವರಣ ಪ್ರವೇಶಿಸುವುದಕ್ಕೂ ಮುನ್ನ ಆತ ತನ್ನ ಟೋಪಿ ಮತ್ತು ಬೂಟುಗಳನ್ನು ತೆಗೆದು ಪವಿತ್ರ ವೃಂದಾವನಕ್ಕೆ ಕಾಲಿಡುತ್ತಾನೆ. ಆತ ತದೇಕ ಚಿತ್ತನಾಗಿ ವೃಂದಾವನವನ್ನು ನೋಡುತ್ತಿರಲು ಅಲ್ಲಿ ಒಂದು ಆಕಾರ ಆತನಿಗೆ ಗೋಚರವಾಗುತ್ತದೆ. ಹೊತ್ತು ಮೀರುತ್ತಿದ್ದಂತೆ ಈ ಆಕಾರ ಸ್ಪಷ್ಟವಾಗುತ್ತಾ ಹೋಗುತ್ತದೆ. 1671 ರಲ್ಲಿ ಜೀವಸಮಾಧಿಗೆ ಪ್ರವೇಶಿಸಿದ್ದ ಶ್ರೀ ಗುರು ರಾಯರು ಆ ಕ್ಷಣ ಮುನ್ರೋಗೆ ಕಾಣಿಸಿಕೊಂಡಿದ್ದರು. ಮುನ್ರೋಗೆ ಮಾತ್ರ ಕಾಣಸಿಕೊಂಡ ರಾಯರಲ್ಲಿ ಆತ ತನ್ನ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡತೊಡಗುತ್ತಾನೆ. ಆತನ ಜೊತೆಯಿದ್ದ ಅಧಿಕಾರಿಗಳು ಮತ್ತು ಮಠದ ಅರ್ಚಕರು ಆತ ತನ್ನಷ್ಟಕ್ಕೆ ಮಾತನಾಡುವುದನ್ನು ನೋಡಿ ಇವನಿಗೆ ಏನಾಯಿತು ಎಂದು ಯೋಚಿಸತೊಡಗುತ್ತಾರೆ.
ನಿಜವಾಗಿ ಆತ ಶ್ರೀ ಗುರುರಾಯರ ಜೊತೆ ಮಾತನಾಡುತ್ತಿದ್ದನು ಬೇರಾರಿಗೂ ಗೋಚರಿಸದ ರಾಯರು ಮುನ್ರೋಗೆ ದರ್ಶನ ನೀಡಿ ಆತನಿಗೆ ಮಂತ್ರಾಕ್ಷತೆಯನ್ನು ಕೊಡುತ್ತಾರೆ. ಮುನ್ರೋ ಕೈಯಲ್ಲಿ ಮಂತ್ರಾಕ್ಷತೆ ಕಂಡು ಅಲ್ಲಿದ್ದವರೆಲ್ಲಾ ದಂಗಾಗಿ ಹೋಗುತ್ತಾರೆ. ರಾಯರ ದರ್ಶನ ಪಡೆದ ಮುನ್ರೋ ಆದಾಯ ಪಡೆದುಕೊಳ್ಳದೆ ಹಿಂತಿರುಗುತ್ತಾನೆ ಮಾತ್ರವಲ್ಲ ಮಠದಿಂದ ಆದಾಯವನ್ನು ಪಡೆಯುವಂತಿಲ್ಲವೆಂದು ಆದೇಶ ಹೊರಡಿಸುತ್ತಾನೆ. ಈ ಅಧಿಸೂಚನೆಯನ್ನು ಮದ್ರಾಸ್ ಸರ್ಕಾರಿ ಗೆಜೆಟಿನ ಅಧ್ಯಾಯ XI ಪುಟ 213 ರಲ್ಲಿ ಮಾಂಚಲಿ ಅದೋನಿ ತಾಲೂಕು ಶೀರ್ಷಿಕೆಯೊಂದಿಗೆ ಪ್ರಕಟಿಸಲಾಗಿದೆ. ಈ ಆದೇಶವನ್ನು ಇನ್ನೂ ಫೋರ್ಟ್ ಸೇಂಟ್ ಜಾರ್ಜ್ ಮತ್ತು ಮಂತ್ರಾಲಯದಲ್ಲಿ ಸಂರಕ್ಷಿಸಿಡಲಾಗಿದೆ.
ಮುನ್ರೋ ಅಂತಹ ಬ್ರಿಟಿಷ್ ಅಧಿಕಾರಿಗೆ ರಾಯರು ದರ್ಶನ ಭಾಗ್ಯ ಕರುಣಿಸಿದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ಮಠದಲ್ಲಿ ಕೆಲವರು ಈ ಬಗ್ಗೆ ಸಂಭ್ರಮಾಚರಣೆ ನಡೆಸುತ್ತಿದ್ದರೆ ಮತ್ತೆ ಕೆಲವರು ಖಿನ್ನರಾಗಿದ್ದರು. ತಾವು ನಿಷ್ಟೆಯಿಂದ ಪೂಜಿಸಿದರೂ ರಾಯರು ತಮಗೆ ದರ್ಶನ ನೀಡದೆ ಮುನ್ರೋಗೆ ದರ್ಶನ ನೀಡಿದರಲ್ಲಾ ಎಂದು ವ್ಯಥೆ ಪಡುತ್ತಿದ್ದರಂತೆ. ಆಗ ಪ್ರಧಾನ ಅರ್ಚಕರ ಕನಸಿನಲ್ಲಿ ಕಾಣಿಸಿಕೊಂಡ ರಾಯರು ಕೃತ ಯುಗದಲ್ಲಿ ತಾನು ಪ್ರಹ್ಲಾದ ಅವತಾರದಲ್ಲಿ ಜನಿಸಿದ್ದಾಗ ಗುರುಕುಲದಲ್ಲಿ ಆತ ತನ್ನ ಸಹಪಾಠಿಯಾಗಿದ್ದನು ಮತ್ತು ಕಲಿಯುಗದಲ್ಲಿ ಆತ ಬ್ರಿಟಿಷ್ ಅಧಿಕಾರಿಯಾಗಿ ಕಾಣಿಸಿಕೊಂಡು ಆತನಿಗೆ ನಿಗದಿಪಡಿಸಲಾಗಿದ್ದ ಕಾರ್ಯವನ್ನು ಪೂರ್ಣಗೊಳಿಸಿದನು ಎಂದರಂತೆ