ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಗ್ಗೆ ನಿಮಗೆ ತಿಳಿಯದ ಒಂದಿಷ್ಟು ಕುತೂಹಲಕಾರಿ ಮಾಹಿತಿ

0
1250

ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕ ನಟ. ಅಭಿಮಾನಿಗಳಿಂದ ಅಪ್ಪು ಎಂದೇ ಕರೆಯಲ್ಪಡುವ ಪುನೀತ್ ನಟನೆಯಲ್ಲದೆ ಹಿನ್ನೆಲೆ ಗಾಯಕರಾಗಿ ನಿರ್ಮಾಪಕರಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಸುಮಾರು ನಾಲ್ಕು ದಶಕಗಳ ತಮ್ಮ ಸಿನಿ ಜೀವನದಲ್ಲಿ ಬಾಲಕಲಾವಿದನಾಗಿ 14 ಮತ್ತು ನಾಯಕನಾಗಿ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1975 ಮಾರ್ಚ್ 17ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ವರನಟ ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮನವರ ಕಿರಿಯ ಪುತ್ರನಾಗಿ ಜನಿಸುತ್ತಾರೆ. ಇವರ ಹಿರಿಯ ಸಹೋದರರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಸಹ ಕನ್ನಡ ಚಿತ್ರ ರಂಗದ ಯಶಸ್ವಿ ನಾಯಕ ನಟರು. ಇವರು ರಾಜ್ ದಂಪತಿಗಳ ಕಿರಿಯ ಮಗುವಾಗಿದ್ದರಿಂದ ಬಹು ಅಕ್ಕರೆಯಾಗಿ ಬೆಳೆದವರು.

ಪುನೀತ್ ಮತ್ತು ಸಹೋದರಿ ಪೂರ್ಣಿಮಾರನ್ನು ಡಾಕ್ಟರ್ ರಾಜಕುಮಾರ್ ಅಣ್ಣಾವ್ರು ತಮ್ಮ ಬಹುತೇಕ ಚಿತ್ರಗಳ ಶೂಟಿಂಗ್ ಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಬಾಲ್ಯದಿಂದಲೇ ಕಲೆಯ ಜೊತೆಗಿನ ನಂಟು ಆರಂಭವಾಗುತ್ತದೆ ಪುನೀತ್ ರಾಜಕುಮಾರ್ ಗೆ. ಪುನೀತ್ ಆರು ತಿಂಗಳ ಮಗುವಿದ್ದಾಗ 1977ರಲ್ಲಿ ತೆರೆಕಂಡ ಪ್ರೇಮದ ಕಾಣಿಕೆ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಬಂದ ಸನಾದಿ ಅಪ್ಪಣ್ಣ. ತಾಯಿಗೆ ತಕ್ಕ ಮಗ. ವಸಂತ ಗೀತೆ. ಭೂಮಿಗೆ ಬಂದ ಭಗವಂತ. ಭಾಗ್ಯವಂತರು. ಮುಂತಾದ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯವನ್ನು ಜನರ ಮುಂದೆ ಇಟ್ಟರು. ಭಾಗ್ಯವಂತ ಚಿತ್ರದಲ್ಲಿ ಬಾನ ದಾರಿಯಲ್ಲಿ ಸೂರ್ಯ. ಚಲಿಸುವ ಮೋಡಗಳು ಚಿತ್ರದಲ್ಲಿ ಕಾಣದಂತೆ ಮಾಯವಾದನು. ಯಾರಿವನು ಚಿತ್ರದಲ್ಲಿ ಕಣ್ಣಿಗೆ ಕಾಣುವ ದೇವರು. ಮುಂತಾದ ಗೀತೆಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿಯೂ ಸಹ ಪ್ರಶಂಸೆಯನ್ನು ಪಡಿಯುತ್ತಾರೆ. ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರದ ಅಭಿನಯಕ್ಕಾಗಿ ಕರ್ನಾಟಕದ ರಾಜ್ಯ ಪ್ರಶಸ್ತಿಯನ್ನು ಪಡೆಯುತ್ತಾರೆ.

ಬಾಲ ಕಲಾವಿದನಾಗಿ ಪುನೀತ್ ಅಭಿನಯಿಸಿದ ಬೆಟ್ಟದ ಹೂವು 1984ರಲ್ಲಿ ತೆರೆಕಂಡ ಎನ್ ಲಕ್ಷ್ಮೀನಾರಾಯಣ ನಿರ್ದೇಶನದ ಈ ಚಿತ್ರಗಳಲ್ಲಿ ಪುನೀತ್ ಬಾಲಕ ರಾಮು ಆಗಿ ನಟಿಸಿದರು. ಶಾಲೆಗೆ ಹೋಗುವ ಬಡ ಬಾಲಕನ ತಳಮಳಗಳನ್ನು ಚಿತ್ರದಲ್ಲಿ ಚೆನ್ನಾಗಿ ಬಿಂಬಿಸುತ್ತಾರೆ. ಈ ಚಿತ್ರ ಇಂಗ್ಲೀಷ್ ಕಾದಂಬರಿ ವಾಟ್ ದೆನ್ ಆಧಾರವಾಗಿತ್ತು. ಈ ಚಿತ್ರದ ಅಭಿನಯಕ್ಕಾಗಿ ಪುನೀತ್ ರಾಜಕುಮಾರ್ ಅವರಿಗೆ ರಾಷ್ಟ್ರಪ್ರಶಸ್ತಿಯು ಸಹ ಸಿಗುತ್ತದೆ. 2002ರಲ್ಲಿ ತೆರೆಕಂಡ ಪೂರಿ ಜಗನ್ನಾಥ್ ನಿರ್ದೇಶನದ ಅಪ್ಪು ಚಿತ್ರದಲ್ಲಿ ನಾಯಕರಾಗಿ ಕನ್ನಡ ಚಿತ್ರರಂಗದಲ್ಲಿ ಎರಡನೆಯ ಇನ್ನಿಂಗ್ಸ್ ನ ಆರಂಭಿಸುತ್ತಾರೆ. ಈ ಚಿತ್ರ ಅದ್ದೂರಿಯ ಯಶಸ್ಸನ್ನು ಕೊಡುತ್ತದೆ. ನಂತರ ತೆರೆಗೆ ಬಂದ ಅಭಿ. ವೀರಕನ್ನಡಿಗ. ಮೌರ್ಯ. ಆಕಾಶ್. ನಮ್ಮಬಸವ. ಅಜಯ್. ಮುಂತಾದ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ದಾಖಲೆಯನ್ನು ಮಾಡಿ ಅದ್ದೂರಿ ಪ್ರದರ್ಶನವನ್ನು ಕಾಣುತ್ತದೆ. ಇವರು ನಾಯಕನಾಗಿ ನಟಿಸಿದ ಮೊದಲ 10 ಚಿತ್ರಗಳು ಶತದಿನವನ್ನ ಪೂರೈಸಿದ್ದು ದಾಖಲೆಯಾಗುತ್ತದೆ. ನಾಯಕನಾಗಿ ಎರಡು ರಾಜ್ಯ ಪ್ರಶಸ್ತಿ 4 ಫಿಲಂಫೇರ್ 2 ಸೈಮಾ ಅವಾರ್ಡ್ ಅನ್ನು ಸಹ ಪಡೆದಿದ್ದಾರೆ.

ಗಾಯಕನಾಗಿ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿರುವ ಪುನೀತ್ ಗಾಯನದಿಂದ ಬಂದ ಸಂಪೂರ್ಣ ಹಣವನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತಾರೆ. ಕಿರುತೆರೆಯಲ್ಲಿ ನಿರೂಪಕರಾಗಿ ಕನ್ನಡದ ಕೋಟ್ಯಾಧಿಪತಿಯ 2 ಸೀಸನ್ ಗಳನ್ನು ಮತ್ತು ಫ್ಯಾಮಿಲಿ ಪವರ್ ಎಂಬ ರಿಯಾಲಿಟಿ ಶೋಗಳನ್ನು ನಿರೂಪಿಸುತ್ತಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮೊದಲ ಅತಿಥಿಯಾಗಿ ಭಾಗವಹಿಸಿದ್ದು ಇನ್ನು ವಿಶೇಷ. ಚಿತ್ರ ನಿರ್ಮಾಪಕರಾಗಿ ಕವಲುದಾರಿ ಮಾಯಾಬಜಾರ್ ಎಂಬ ಚಿತ್ರಗಳನ್ನು ತಮ್ಮ ಓವ್ನ್ ಬ್ಯಾನರ್ ನಲ್ಲಿ ನಿರ್ಮಿಸಿರುವ ಪುನೀತ್ ತಮ್ಮ ಪ್ರೊಡಕ್ಷನ್ ಹೌಸ್ ಮೂಲಕ ಕಿರುತೆರೆ ಧಾರವಾಹಿ ಕೂಡ ನಿರ್ಮಿಸಿದ್ದಾರೆ. ತಾಯಿಯ ನೆನಪಿನಲ್ಲಿ ಪಿ ಆರ್ ಕೆ ಆಡಿಯೋ ಕಂಪನಿಯೊಂದನ್ನ ಸ್ಥಾಪಿಸಿದ್ದಾರೆ. ಮೈಸೂರಿನ ಶಕ್ತಿಧಾಮ ಆಶ್ರಮದ ಮೂಲಕ ಸಮಾಜ ಸೇವೆಗೆ ತೊಡಗಿರುವ ಪುನೀತ್ ಬೆಂಗಳೂರು ಪ್ರೀಮಿಯರ್ ಪುಟ್ ಬಾಲ್ ತಂಡದ ಒಡೆಯ ಆಗಿದ್ದಾರೆ.

ಕರ್ನಾಟಕ ಸರ್ಕಾರದ ನಂದಿನಿ ಹಾಲು ಉತ್ಪನ್ನಗಳು ಮತ್ತು ಎಲ್ಇಡಿ ಬಲ್ಪ್ ಗಳ ರಾಯಭಾರಿಯು ಸಹ ಆಗಿದ್ದಾರೆ. ಒಂದು ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಭಾರಿಯಾಗಿದ್ದರು. 1999ರಲ್ಲಿ ಚಿಕ್ಕಮಂಗಳೂರಿನವರಾದಂತಹ ಅಶ್ವಿನಿ ಅವರನ್ನು ಕೈ ಹಿಡಿಯುತ್ತಾರೆ ಪುನೀತ್. ಈ ದಂಪತಿಗಳಿಗೆ ದೃತಿ ಮತ್ತು ವಂದಿತ ಎಂಬ ಪುತ್ರಿಯರಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರ ಪ್ರಪಂಚಾದ್ಯಂತ ತುಂಬ ಸದ್ದು ಮಾಡುತ್ತದೆ. ಅದರಲ್ಲಿ ಬೊಂಬೆ ಹೇಳುತೈತೆ ಅನ್ನುವ ಒಂದು ಸಾಂಗ್ ಇಡೀ ಪ್ರಪಂಚಾದ್ಯಂತ ಸದ್ದನ್ನು ಮಾಡುತ್ತದೆ. ಅಷ್ಟೇ ಅಲ್ಲದೆ ತುಂಬಾ ಜನರ ಮೆಚ್ಚುಗೆಯನ್ನು ಪಡೆಯುತ್ತಾರೆ ಪುನೀತ್ ರಾಜಕುಮಾರ್. ಇವಿಷ್ಟು ಪುನೀತ್ ರಾಜಕುಮಾರ್ ಅಪ್ಪು ಲೈಫ್ ಸ್ಟೋರಿ ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here